ಮುಂಬೈ, ಜು 16 (DaijiworldNews/PY): ಕುಖ್ಯಾತ ರೌಡಿ ಖಾನ್ ಮುಬಾರಕ್ ಸಹಚರ ಗಜೇಂದ್ರ ಸಿಂಗ್ ಅನ್ನು ಬುಧವಾರ ತಡರಾತ್ರಿ ಉತ್ತರಪ್ರದೇಶ ಎಸ್ಟಿಎಫ್ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ.
1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಬು ಸಲೇಂ ಶಿಕ್ಷೆಗೆ ಒಳಗಾಗಿದ್ದ. ಆತನೊಂದಿಗೆ ಗಜೇಂದ್ರ ಸಿಂಗ್ಗೆ ನಿಕಟ ಸಂಪರ್ಕವಿತ್ತು. ಅಬು ಸಲೇಂನಿಗೆ ಮುಂಬೈ ಸ್ಪೋಟ ಪ್ರರಕರಣದಲ್ಲಿ ಶಿಕ್ಷೆಯಾದ ಬಳಿಕ ಗಜೇಂದ್ರ ಸಿಂಗ್ ಕುಖ್ಯಾತ ರೌಡಿ ಖಾನ್ ಮುಬಾರಕ್ ಜೊತೆ ಕಾಣಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಗಜೇಂದ್ರ ಸಿಂಗ್ ಆಸ್ತಿ ಸಂಬಂಧಿತ ಪ್ರಕರಣವೊಂದರಲ್ಲಿ ದೆಹಲಿ ಮೂಲದ ಉದ್ಯಮಿಯೊಬ್ಬರಿಂದ 2014 ರಲ್ಲಿ 1.80 ಕೋಟಿ ರೂ. ತೆಗೆದುಕೊಂಡಿದ್ದರು. ಹಣವನ್ನು ಹಿಂದಿರುಗಿಸುವಂತೆ ಒತ್ತಡ ಹೇರಿದಾಗ, ಸಿಂಗ್, ಖಾನ್ ಮುಬಾರಕ್ ಅವರ ಸಹಚರರು ಉದ್ಯಮಿ ಮೇಲೆ ಗುಂಡು ಹಾರಿಸಿ, ಬಳಿಕ ಪರಾರಿಯಾಗಿದ್ದರು ಎಂದು ಹೆಚ್ಚುವರಿ ಎಸ್ಟಿಎಫ್ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಗಜೇಂದ್ರ ಸಿಂಗ್, ಅಬು ಸಲೇಂ ಮತ್ತು ಖಾನ್ ಮುಬಾರಕ್ ಅವರಿಗೆ ಸಂಬಂಧಿಸಿದ ಅಕ್ರಮ ಹಣವನ್ನು ದೆಹಲಿಯಲ್ಲಿ ಹೂಡಿಕೆ ಮಾಡಿದ್ದಾನೆ ಎಂದು ಅಧಿಕಾರಿ ಹೇಳಿದರು.