ನವದೆಹಲಿ, ಜು 16 (DaijiworldNews/PY): ಭಾರತ ಹಾಗೂ ಚೀನಾ ಎಲ್ಎಸಿಯಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯಲು ಒಪ್ಪಿಕೊಂಡಿದ್ದು, ಆದರೆ, ಚೀನಾದ ಈ ಕುರಿತ ನಿರ್ಧಾರವನ್ನು ನಿರಂತರ ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಭಾರತೀಯ ಸೇನೆ ಪುನರುಚ್ಚರಿಸಿದೆ.
ಸಂಪೂರ್ಣವಾಗಿ ಹಿಂಪಡೆಯುವ ಉದ್ದೇಶಕ್ಕೆ ಉಭಯ ದೇಶಗಳು ಬದ್ಧರಾಗಿದ್ದು, ಈ ಪ್ರಕ್ರಿಯೆಯು ಸಂಕೀರ್ಣವಾಗಿದೆ ಮತ್ತು ನಿರಂತರ ಪರಿಶೀಲನೆಯ ಅವಶ್ಯಕತೆ ಇದೆ ಎಂದು ಭಾರತೀಯ ಸೇನೆ ಹೇಳಿದೆ.
ಜುಲೈ 14 ರಂದು ನಾಲ್ಕನೇ ಸುತ್ತಿನ ಮಾತುಕತೆಗಾಗಿ ಭಾರತೀಯ ಮತ್ತು ಕಮಾಂಡರ್ಗಳು ಚುಶುಲ್ನಲ್ಲಿ ಸಭೆ ನಡೆಸಿದ್ದು, ಈಗಿನ ಸ್ಥಳಗಳಿಂದ ಪೂರ್ವನಿರ್ಧರಿತ ದೂರಕ್ಕೆ ಸೈನ್ಯವನ್ನು ಹಿಂದಕ್ಕೆ ಪಡೆಯಲು ಉಭಯ ದೇಶಗಳು ತೀರ್ಮಾನ ಮಾಡಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನೆಯ ಅಧಿಕಾರಿಯೊಬ್ಬರು, ಎರಡು ಸ್ಥಳಗಳಿಂದ ಸೇನೆಯನ್ನು ಪುನಃ ಕರೆಸಿಕೊಳ್ಳಲು ಎರಡೂ ಕಡೆಯವರೂ ಒಪ್ಪಿಗೆ ಸೂಚಿಸಿದ್ದಾರೆ. ಭಾಗಶಃ ಹಾಟ್ ಸ್ಪ್ರಿಂಗ್ಸ್ ಮತ್ತು ಪ್ಯಾಂಗೊಂಗ್ ತ್ಸೋಗಳಿಂದ ಸೈನ್ಯವನ್ನು ಹಿಂಪಡೆಯುವ ತೀರ್ಮಾನ ಮಾಡಿದ್ದು, ಮುಂದಿನ ದಿನಗಳಲ್ಲಿ ಉಳಿದ ಪ್ರದೇಶಗಳಿಂದ ಸೇನೆಯನ್ನು ವಾಪಾಸ್ಸು ಕರೆಸಿಕೊಳ್ಳುವ ನಿರೀಕ್ಷೆಯಿದೆ ಎಂದಿದ್ದಾರೆ.
ಹಿರಿಯ ಕಮಾಂಡರ್ಗಳು ಮೊದಲ ಹಂತದ ಹಿಂಪಡೆಯುವಿಕೆಯ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಿದ್ದು,ಅದು ಪೂರ್ಣಗೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಎಲ್ಎಸಿಯ ಉದ್ದಕ್ಕೂ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಪರಿಹರಿಸಲು ಭಾರತ ಮತ್ತು ಚೀನಾ ಸ್ಥಾಪಿತ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಚರ್ಚೆಯಲ್ಲಿ ತೊಡಗಿವೆ.