ನವದೆಹಲಿ, ಜು 17 (Daijiworld News/MSP): ರಾಜಸ್ಥಾನದಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟಿನ ನಡುವೆ ಕಾಂಗ್ರೆಸ್ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದು, " ಪಕ್ಷ ವಿರೋಧಿ ಚಟುವಟಿಕೆ, ಸರ್ಕಾರ ಉರುಳಿಸುವ ಪಿತೂರಿಯ ಆರೋಪದ ಮಾಜಿ ಡಿಸಿಎಂ ಸಚಿನ್ ಪೈಲೆಟ್ ಬೆಂಬಲಿಗರಾದ ಶಾಸಕರಾದ ಬನ್ವರ್ ಲಾಲ್ ಶರ್ಮ ಮತ್ತು ವಿಶ್ವೇಂದ್ರ ಸಿಂಗ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ. ಪಕ್ಷದಿಂದ ಅವರಿಗೆ ಶೋಕಾಸ್ ನೊಟೀಸ್ ಸಹ ನೀಡಲಾಗಿದೆ.
ಈ ಬಗ್ಗೆ ದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ, " ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಇಬ್ಬರು ಬಂಡಾಯ ಶಾಸಕರನ್ನು ಅಮಾನತುಗೊಳಿಸಿದೆ ಎಂದಿದ್ದಾರೆ.
ಈ ನಡುವೆ ಅಶೋಕ್ ಗೆಹ್ಲೊಟ್ ನೇತೃತ್ವದ ಸರ್ಕಾರವನ್ನು ಬಿಜೆಪಿ ಉರುಳಿಸಲು ಹವಣಿಸುತ್ತಿದ್ದು ಶಾಸಕರ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಇದಕ್ಕೆ ಸಂಬಂಧಿಸಿದ ಆಡಿಯೊ ಟೇಪನ್ನು ಬಿಡುಗಡೆ ಮಾಡಿದೆ. ಈ ಆಡಿಯೋ ಟೇಪ್ ನಲ್ಲಿ ಮೂರು ಭಾಷೆಯಲ್ಲಿ ಮಾತುಕತೆ ನಡೆದಿದೆ. ಸರ್ಕಾರ ಪತನಗೊಳಿಸಿದಲ್ಲಿ ಮೂರು ಕಂತಿನಲ್ಲಿ ಹಣ ನೀಡುವ ಸಂಬಂಧ ಮಾತುಕತೆ ನಡೆದಿದೆ ಎಂದು ಆರೋಪಿಸಲಾಗಿತ್ತು.
ಈ ಘಟನೆಯನ್ನು ಉಲ್ಲೇಖಿಸಿ ಹಣದ ಆಮಿಷವೊಡ್ಡಿ ಶಾಸಕರನ್ನು ಸೆಳೆಯಲು ನೋಡಿದ ಶಾಸಕರ ವಿರುದ್ಧ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.