ಅಸ್ಸಾಂ, ಜು.17 (DaijiworldNews/MB) : ತಮಗೆ ಸರಿಯಾದ ಆಹಾರ, ನೀರು ಒದಗಿಸುತ್ತಿಲ್ಲ ಎಂದು ಆಕ್ರೋಶಗೊಂಡ ಅಸ್ಸಾಂನ ಕಮ್ರೂಪ್ ಜಿಲ್ಲೆಯ ಸಿಒವಿಐಡಿ ಕೋವಿಡ್ ಕೇಂದ್ರದಲ್ಲಿದ್ದ ನೂರು ರೋಗಿಗಳು ಅಲ್ಲಿಂದ ತಪ್ಪಿಸಿಕೊಂಡು ರಸ್ತೆಗಳಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆಗಿಳಿದ ಘಟನೆ ಗುರುವಾರ ನಡೆದಿದೆ.
ಕೋವಿಡ್ ರೋಗಿಗಳು ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ಕಾರಣ ಜನರಲ್ಲಿ ತೀವ್ರ ಆತಂಕ ಉಂಟಾಗಿದ್ದು ಸ್ಥಳಕ್ಕೆ ಧಾವಿಸಿದ ಕಮ್ರೂಪ್ ಜಿಲ್ಲಾಧಿಕಾರಿ ಕೈಲಾಶ್ ಕಾರ್ತಿಕ್ ಮತ್ತು ಪೊಲೀಸರು ಕೋವಿಡ್ ಕೇಂದ್ರಕ್ಕೆ ಹಿಂದಿರುಗುವಂತೆ ರೋಗಿಗಳನ್ನು ಒತ್ತಾಯಿಸಿದ್ದಾರೆ. ಹಾಗೆಯೇ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ.
ರೋಗಿಗಳು ತಮಗೆ ಆಹಾರ ಮತ್ತು ನೀರು ನೀಡುತ್ತಿಲ್ಲ. ಬೆಡ್ಗಳ ಸೌಲಭ್ಯವು ಕೂಡಾ ಸರಿಯಾಗಿಲ್ಲ. ಒಂದೇ ಕೋಣೆಯಲ್ಲಿ 10-12 ಜನರನ್ನು ಇರಿಸಲಾಗಿದೆ ಎಂದು ದೂರಿ ಪ್ರತಿಭಟನೆಗೆ ಇಳಿದಿದ್ದಾರೆ.
''ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ರೋಗಿಗಳ ಆರೋಪದ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಬಳಿಕ ರೋಗಿಗಳು ಕೋವಿಡ್ ಕೇಂದ್ರಕ್ಕೆ ಮರಳಿದ್ದಾರೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು, ''ನಾವು ಅವರಿಂದ ಇತರರಿಗೆ ಕೊರೊನಾ ಹರಡಬಾರದು ಹಾಗೂ ಅವರು ಗುಣಮುಖರಾಗಬೇಕೆಂದು ಕೋವಿಡ್ ಕೇಂದ್ರ ಸೌಲಭ್ಯವನ್ನು ಒದಗಿಸಿದ್ದೇವೆ. ಕೋವಿಡ್ ಕೇಂದ್ರದಲ್ಲಿರುವ ಸೌಲಭ್ಯದಿಂದ ರೋಗಿಗಳಿಗೆ ಸಂತೋಷವಿಲ್ಲದಿದ್ದರೆ ಅವರು ಹೋಂ ಕ್ವಾರಂಟೈನ್ಗೆ ಒಳಗಾಗಬಹುದು'' ಎಂದು ಹೇಳಿದ್ದಾರೆ.
''ಆರೋಗ್ಯ ಕಾರ್ಯಕರ್ತರು ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಹೊರೆ ಅವರ ಮೇಲೆ ಇರುವುದರಿಂದ ಸ್ವಲ್ಪ ವಿಳಂಬವಾಗಬಹುದು ಎಂದು ತಿಳಿಸಿದ ಬೇರೆ ರಾಜ್ಯಗಳಲ್ಲಿ ಪರೀಕ್ಷೆಗೆ ಸಹ ಜನರೇ ಪಾವತಿ ಮಾಡಬೇಕು. ಆದರೆ ಅಸ್ಸಾಂನಲ್ಲಿ ಪರೀಕ್ಷೆಯಿಂದ ಹಿಡಿದು ಅವರ ವಾಸ್ತವ್ಯ ಮತ್ತು ಆಹಾರದವರೆಗಿನ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸುತ್ತಿದೆ'' ಎಂದು ಇದೇ ಸಂದರ್ಭದಲ್ಲಿ ಹೇಳಿದರು.