ನವದೆಹಲಿ, ಜು 17 (DaijiworldNews/PY): ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶವಿಲ್ಲ. ದ್ವಿಪಕ್ಷೀಯ ವಿಮಾನಯಾನ ಹಾರಾಟ ಒಪ್ಪಂದಕ್ಕೆ ಭಾರತ ಈಗಾಗಲೇ ಸಹಿ ಹಾಕಿದ್ದು, ಇದರ ಪ್ರಕಾರ ಕೆಲವು ದೇಶಗಳಿಗೆ ಮಾತ್ರ ವಿಮಾನ ಹಾರಾಟಕ್ಕೆ ಅನುಮತಿ ಕಲ್ಪಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ ಹಾಗೂ ಫ್ರಾನ್ಸ್ನೊಂದಿಗೆ ಭಾರತ ಪ್ರತ್ಯೇಕ ದ್ವಿಪಕ್ಷೀಯ ವಿಮಾನಯಾನ ಹಾರಾಟ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ, ಬೆಂಗಳೂರು, ಮುಂಬೈ, ಪ್ಯಾರಿಸ್, ದೆಹಲಿ, ಫ್ರಾನ್ಸ್ನ ನಡುವೆ ಜು 18ರಿಂದ ಆಗಸ್ಟ್ 1ರವರೆಗೆ ವಿಮಾನ ಹಾರಾಡಲಿದೆ ಎಂದು ತಿಳಿಸಿದ್ದಾರೆ.
ಭಾರತ ಹಾಗೂ ಅಮೆರಿಕದ ನಡುವೆ ಜು 17ರಿಂದ 31ರವರೆಗೆ ಅಮೆರಿಕದ ಯುನೈಟೆಡ್ ಏರ್ಲೈನ್ಸ್ನ 18 ವಿಮಾನಗಳು ಹಾರಾಡಲಿವೆ. ಭಾರತ ಹಾಗೂ ಅಮೆರಿಕದ ನಡುವೆ ವಿಮಾನ ಹಾರಾಟ ನಡೆಸುವ ಸಂದರ್ಭ ದೆಹಲಿ ಹಾಗೂ ನ್ಯೂಜಿರ್ಸಿ ನಡುವೆ ಕೂಡಾ ಪ್ರತಿದಿನ ವಿಮಾನ ಹಾರಾಟ ನಡೆಸಲಿದ್ದು, ವಾರಕ್ಕೆ ಮೂರು ಬಾರಿ ದೆಹಲಿ ಹಾಗೂ ಸ್ಯಾನ್ಫ್ರಾನ್ಸಿಸ್ಕೊ ನಡುವೆ ವಿಮಾನ ಹಾರಾಡಲಿದೆ. ಇನ್ನು ಭಾರತದಿಂದ ಏರ್ ಇಂಡಿಯಾ ವಿಮಾನವು ಫ್ರಾನ್ಸ್ ಹಾಗೂ ಅಮೆರಿಕಕ್ಕೆ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ದ್ವಿಪಕ್ಷೀಯ ಒಪ್ಪಂದಕ್ಕೆ ಕೂಡಲೇ ಜರ್ಮನಿ ಹಾಗೂ ಬ್ರಿಟನ್ ಭಾಗವಹಿಸಲಿದ್ದು, ಈ ಒಪ್ಪಂದದ ಪ್ರಕಾರ, ದಿನಕ್ಕೆ ಎರಡು ವಿಮಾನಗಳು ದೆಹಲಿ ಹಾಗೂ ಲಂಡನ್ನ ನಡುವೆ ಹಾರಾಡಲಿವೆ ಎಂದಿದ್ದಾರೆ.