ನವದೆಹಲಿ, ಜು.17 (DaijiworldNews/MB) : 'ಚೀನಾ ಭಾರತದ ನಡುವಿನ ಸಂಘರ್ಷದ ವಿಚಾರದಲ್ಲಿ ಶುಕ್ರವಾರ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ''2014 ರಿಂದ, ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಪ್ರಮಾದ, ವಿವೇಚನೆಯ ಕೊರತೆ ಭಾರತವನ್ನು ಮೂಲಭೂತವಾಗಿ ದುರ್ಬಲಗೊಳಿಸಿವೆ. ಹಾಗೂ ನಮ್ಮನ್ನು ದುರ್ಬಲಗೊಳಿಸಿದೆ'' ಎಂದು ಹೇಳಿದ್ದಾರೆ.
ಈ ಬಗ್ಗೆ ತನ್ನ ಟ್ವೀಟರ್ನಲ್ಲಿ ವಿಡಿಯೋ ಮೂಲಕ ಅಭಿಪ್ರಾಯ ಹಂಚಿಕೊಂಡಿರುವ ಅವರು, ''ಭಾರತದ ಯಾವ ಪರಿಸ್ಥಿತಿ ಚೀನಾದ ಭಾರತದ ಮೇಲೆ ಇಷ್ಟೊಂದು ಆಕ್ರಮಣಕಾರಿಯಾಗಿ ವರ್ತಿಸಲು ಕಾರಣವಾಗಿದೆ ಎಂದು ಪ್ರಶ್ನಿಸಿರುವ ಅವರು, 2014 ರಿಂದ, ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಪ್ರಮಾದ, ವಿವೇಚನೆಯ ಕೊರತೆ ಭಾರತವನ್ನು ಮೂಲಭೂತವಾಗಿ ದುರ್ಬಲಗೊಳಿಸಿವೆ. ಹಾಗೂ ನಮ್ಮನ್ನು ದುರ್ಬಲಗೊಳಿಸಿದೆ. ಬರೀ ಮಾತು ಭೌಗೋಳಿಕ ರಾಜಕೀಯದಲ್ಲಿ ಸಾಕಾಗುವುದಿಲ್ಲ'' ಎಂದು ಟೀಕೆ ಮಾಡಿದ್ದಾರೆ.
''ಬಿಜೆಪಿ ಸರ್ಕಾರವು ಈ ಆರು ವರ್ಷದಲ್ಲಿ ಆರ್ಥಿಕ ರಕ್ಷಣೆ ಹಾಗೂ ಅಂತರ್ ರಾಷ್ಟ್ರೀಯ ಸಂಬಂಧ ರಕ್ಷಣೆಯ ವಿಚಾರದಲ್ಲಿ ಭಾರತವನ್ನು ತೊಂದರೆಗೆ ಒಳಪಡಿಸಿದೆ ಹಾಗೂ ಭಾರತಕ್ಕೆ ಅಡಚಣೆ ಉಂಟು ಮಾಡಿದೆ. ಈ ಪರಿಸ್ಥಿತಿಯು ಚೀನಾ ಭಾರತದೊಂದಿಗೆ ಇಷ್ಟೊಂದು ಆಕ್ರಮಣಕಾರಿಯಾಗಿ ವರ್ತಿಸಲು ಕಾರಣವಾಗಿದೆ'' ಎಂದು ದೂರಿದ್ದಾರೆ.
''ದೇಶವೊಂದನ್ನು ಬರೀ ಒಂದು ವಿಷಯದಿಂದ ರಕ್ಷಿಸಲಾಗದು. ಹಾಗಾಗಿ ದೇಶವನ್ನು ವಿದೇಶ ಸಂಬಂಧದಿಂದ ರಕ್ಷಿಸಬೇಕು, ನೆರೆಹೊರೆ ದೇಶದಿಂದ ರಕ್ಷಿಸಬೇಕು, ಇದರ ಆರ್ಥಿಕತೆಯಿಂದ ರಕ್ಷಿಸಬೇಕು, ಇದನ್ನು ಭಾರತದ ಜನರಿಗಿರುವ ಭಾವನೆ ಹಾಗೂ ದೃಷ್ಟಿಕೋನದಿಂದ ರಕ್ಷಿಸಬಹುದು. ಈ ಆರು ವರ್ಷಗಳಲ್ಲಿ ಭಾರತವು ಈ ಎಲ್ಲಾ ವಲಯಗಳಲ್ಲಿ ತೊಂದರೆಗೆ ಒಳಪಟ್ಟಿದೆ ಹಾಗೂ ಅಡ್ಡಿಗೆ ಒಳಗಾಗಿದೆ'' ಎಂದು ಹೇಳಿದ್ದಾರೆ.
''ಮೊದಲು ಭಾರತವು ಯುನೈಟೆಡ್ ಸ್ಟೇಟ್ಸ್ ಹಾಗೂ ರಷ್ಯಾದೊಂದಿಗೆ ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಂದಿತ್ತು. ಆದರೆ ಈಗ ಬರೀ ವ್ಯಾವಹಾರಿಕ ಸಂಬಂಧವನ್ನು ಭಾರತವು ಯುನೈಟೆಡ್ ಸ್ಟೇಟ್ಸ್ ಹಾಗೂ ರಷ್ಯಾದೊಂದಿಗೆ ಹೊಂದಿದೆ. ಜಾಗತಿಕ ರಾಜಕೀಯದಲ್ಲಿ ಭಾರತವು ಕುಶಲವಾಗಿತ್ತು. ಆದರೆ ಈಗ ಭಾರತವು ಈ ಜಾಗತಿಕ ಸಂಬಂಧವನ್ನು ಆನಂದಿಸುವ ಪರಿಸ್ಥಿತಿ ಇಲ್ಲ. ಈ ಮೊದಲು ನಮ್ಮೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ನೇಪಾಳ, ಭೂತಾನ್ ಹಾಗೂ ಶ್ರೀಲಂಕಾಕ್ಕೂ ಕೂಡಾ ಭಾರತದ ಮೇಲೆ ದ್ವೇಷ ಹುಟ್ಟುಹಾಕಿ ಕಾಪಾಡಿಕೊಳ್ಳುವಲ್ಲಿ ಕೇಂದ್ರ ಈಗ ಯಶಸ್ವಿಯಾಗಿದೆ. ಈ 50 ವರ್ಷದಲ್ಲೇ ಅತೀ ಕೆಟ್ಟದಾದ ಆರ್ಥಿಕತೆಯನ್ನು ನಾವು ಈಗ ನೋಡುತ್ತಿದ್ದೇವೆ. ಭಾರತದ ಆರ್ಥಿಕತೆಯು ದುರಂತವಾಗಿದೆ'' ಎಂದು ಕೇಂದ್ರದ ವಿರುದ್ಧದ ಟೀಕಾಪ್ರಹಾರ ನಡೆಸಿದ್ದಾರೆ.