ಲಡಾಖ್, ಜು 17 (Daijiworld News/MSP): " ಭಾರತದ ಒಂದಿಂಚು ಭೂಮಿಯನ್ನು ವಿಶ್ವದ ಯಾವುದೇ ಶಕ್ತಿಯಿಂದ ತೆಗೆದುಕೊಳ್ಳಲಾಗುವುದಿಲ್ಲ" ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಭರವಸೆ ನೀಡಿದ್ದಾರೆ.
ಲೇಹ್, ಲಡಾಖ್ ಮತ್ತು ಜಮ್ಮು ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸದ ವೇಳೆ ಲುಕುಂಗ್ ವಿನಲ್ಲಿ ವ ಭಾರತೀಯ ಸೇನೆ ಮತ್ತು ಐಟಿಬಿಪಿ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸುತ್ತಿರುವಾಗ ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿದ್ದ ಉದ್ವಿಗ್ನ ಪರಿಸ್ಥಿತಿ ಸಂಬಂಧಿಸಿದಂತೆ ಮಾತನಾಡಿದ ಅವರು, "ಗಡಿ ವಿವಾದವನ್ನು ಬಗೆಹರಿಸಲು ಮಾತುಕತೆಗಳು ನಡೆಯುತ್ತಿವೆ, ಆದರೆ ಮಾತುಕತೆಯಿಂದ ಎಷ್ಟರ ಮಟ್ಟಿಗೆ ಪರಿಹರಿಸಬಹುದೆಂದು ಬಗ್ಗೆ ನಾನು ಖಾತರಿಪಡಿಸುವುದಿಲ್ಲ. ಆದರೆ ಜಗತ್ತಿನ ಯಾವುದೇ ಶಕ್ತಿಯಿಂದಲೂ ನಮ್ಮ ಭೂಮಿಯಿಂದ ಒಂದು ಇಂಚು ಕೂಡ ತೆಗೆದುಕೊಳ್ಳಲಾಗುವುದಿಲ್ಲ ನಿಮಗೆ ಭರವಸೆ ನೀಡಬಲ್ಲೆ ಎಂದು ಹೇಳಿದ್ದಾರೆ"
ಅಲ್ಲದೆ ಭಾರತ - ಚೀನಾ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಹೆಚ್ಚು ಒತ್ತು ನೀಡಿದ ಅವರು, "ಮಾತುಕತೆಯಿಂದ ಪರಿಹಾರವನ್ನು ಕಂಡುಹಿಡಿಯಬಹುದಾದರೆ, ಇದಕ್ಕಿಂತ ಉತ್ತಮವಾದದ್ದೇನೂ ಇಲ್ಲ" ಎಂದು ಹೇಳಿದರು.
"ಇತ್ತೀಚೆಗೆ ಭಾರತ ಮತ್ತು ಚೀನಾ ಸೈನ್ಯದ ನಡುವೆ ಏನಾಯಿತು, ನಮ್ಮ ಗಡಿಯನ್ನು ರಕ್ಷಿಸಲು ನಮ್ಮ ಕೆಲವು ಸೇನಾ ಸಿಬ್ಬಂದಿಗಳು ತಮ್ಮ ಪ್ರಾಣವನ್ನೇ ತ್ಯಾಗ ಮಾಡಬೇಕಾಯಿತು. ಅವರಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ ,ನಿಮ್ಮೆಲ್ಲರನ್ನೂ ಭೇಟಿಯಾಗಲು ನನಗೆ ಸಂತೋಷವಾಗಿದೆ ಆದರೆ ಅವರ ನಷ್ಟದಿಂದಾಗಿ ದುಃಖಿತವಾಗಿದೆ. ಎಂದು ಇದೇ ವೇಳೆ ಹೇಳಿದರು.