ಬೆಂಗಳೂರು, ಜು 17 (DaijiworldNews/PY): ಕೊರೊನಾ ರೋಗಿಗಳಿಗೆ ಚಿಕಿತ್ಸೆಗೆ ಪ್ರವೇಶ ನಿರಾಕರಿಸಿದ್ದ ಖಾಸಗಿ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಶುಕ್ರವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಶುಕ್ರವಾರ ಬಿಬಿಎಂಪಿ ಪಾಲಿಕೆಯ ಎಂಟು ವಲಯಗಳಲ್ಲಿ ಕೊರೊನಾ ನಿಯಂತ್ರಣ ನಿರ್ವಹಣೆಯ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಿಕೊಂಡಿರುವ ಸಚಿವರ ಸಭೆಯನ್ನು ನಡೆಸಿ ಮಾತನಾಡಿದ ಅವರು, ಸೋಂಕಿತರಿಗೆ ಆಸ್ಪತ್ರೆಗೆ ಪ್ರವೇಶಿಸುವಲ್ಲಿ ಆಗುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸರ್ಕಾರಿ ಮಾರ್ಗಸೂಚಿಗಳಿಗೆ ಅನುಸಾರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಹಾಗೂ ಸೋಂಕಿತರಲ್ಲದ ರೋಗಿಗಳಿಗೆ ಚಿಕಿತ್ಸೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಯಡಿಯೂರಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊರೊನಾ ಆರೈಕೆ ಕೇಂದ್ರಗಳಿಗೆ ರೋಗಲಕ್ಷಣವಿಲ್ಲದ ಮತ್ತು ಸ್ವಲ್ಪ ರೋಗಲಕ್ಷಣದ ರೋಗಿಗಳ ಪ್ರವೇಶದ ಬಗ್ಗೆ ಖಚಿತಪಡಿಸಿಕೊಳ್ಳಬೇಕು, ಅಥವಾ ಹೋಂಕ್ವಾರೆಂಟೈನ್ ಮಾಡಿ. ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಅಗತ್ಯವಿರುವವರಿಗೆ ಆಸ್ಪತ್ರೆಯ ಹಾಸಿಗೆಗಳು ಲಭ್ಯವಾಗುವಂತೆ ನೋಡೊಕೊಳ್ಳಿ ಎಂದರು.
ಮೃತ ವ್ಯಕ್ತಿಗಳಿಗೆ ಶೀಘ್ರವಾಗಿ ಆಂಟಿಜೆನಿಕ್ ಪರೀಕ್ಷೆಗಳನ್ನು ನಡೆಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದು, ಮಾರ್ಗಸೂಚಿಗಳ ಪ್ರಕಾರ ಮೃತದೇಹವನ್ನು ಹಸ್ತಾಂತರಿಸಲು ಅಥವಾ ಅಂತಿಮ ವಿಧಿಗಳನ್ನು ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಹೇಳಿದರು.
ಮನೆಯಲ್ಲಿ ಮರಣ ಹೊಂದಿದವರಿಗೆ ಶೀಘ್ರವಾಗಿ ಆಂಟಿಜೆನಿಕ್ ಪರೀಕ್ಷೆಗಳನ್ನು ನಡೆಸಬೇಕು ಮತ್ತು ಕುಟುಂಬಕ್ಕೆ ಶೀಘ್ರವಾಗಿ ಅಂತಿಮ ವಿಧಿಗಳನ್ನು ನಡೆಸಲು ಅನುಕೂಲವಾಗಬೇಕೆಂದು ತಿಳಿಸಿದರು.
ಈ ಸಂದರ್ಭ, ಕೊರೊನಾವನ್ನು ತಡೆಗಟ್ಟಲು ಲಾಕ್ಡೌನ್ ಪರಿಹಾರವಲ್ಲ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದ್ದು, ಜುಲೈ 23 ರ ನಂತರ ನಗರದಲ್ಲಿ ಲಾಕ್ಡೌನ್ ವಿಸ್ತರಿಸುವಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವುದು ಮತ್ತು ಅನಗತ್ಯವಾಗಿ ತಿರುಗಾಡದೆ ಸಹಕರಿಸುವುದು ಎಲ್ಲ ನಾಗರಿಕರ ಜವಾಬ್ದಾರಿಯಾಗಿದೆ. ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದ್ದಲ್ಲಿ ಇದು ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಸಮಸ್ಯೆಗಳನ್ನು ಸೃಷ್ಠಿಸುತ್ತವೆ ಎಂದರು.
ವೈದ್ಯರ ಕೊರತೆಯನ್ನು ತಪ್ಪಿಸಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪ್ರತಿ ವಾರ್ಡ್ನಲ್ಲಿ ಸ್ವಯಂಸೇವಕರನ್ನು ಗುರುತಿಸಲಾಗಿದ್ದು, ಆಂಬ್ಯುಲೆನ್ಸ್ಗಳಿಗೂ ಸೂಚನೆ ನೀಡಲಾಗಿದೆ. ಮನೆಗಳಲ್ಲಿ ಸೌಕರ್ಯಗಳ ಕೊರತೆಯಿಂದಾಗಿ ಹೋಂಕ್ವಾರಂಟೈನ್ ಅನ್ನು ಮಾಡಲು ಸಾಧ್ಯವಾಗದ ಜನರನ್ನು ಸಂಪರ್ಕಿಸಲು ಪ್ರತಿ ಬಿಬಿಎಂಪಿ ವಾರ್ಡ್ನಲ್ಲಿ ಸಭಾಂಗಣಗಳು ಮತ್ತು ಹೊಟೇಲ್ಗಳನ್ನು ಗುರುತಿಸಲಾಗಿದೆ ಎಂದರು.
ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯ ಕೊರೊನಾ ಪರೀಕ್ಷೆಗಳನ್ನು ನಡೆಸಲು ಮತ್ತು ಕೆಲವು ಸ್ಥಳಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ನಿರ್ದೇಶನ ನೀಡಿದರು.
ಹಾಸಿಗೆ ಹಂಚಿಕೆ ವ್ಯವಸ್ಥೆಯನ್ನು ವಲಯ ಮಟ್ಟಕ್ಕೆ ವಿಕೇಂದ್ರೀಕರಿಸಲು ಹಾಗೂ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟ ಎರಡು ಗಂಟೆಗಳಲ್ಲಿ ಸೋಂಕಿತರ ಮನೆಬಾಗಿಲಿಗೆ ಆಂಬುಲೆನ್ಸ್ ಅನ್ನು ತರುವ ವ್ಯವಸ್ಥೆಯನನ್ಉ ಮಾಡಲಾಗುತ್ತದ ಎಂದರು.
ಕೊರೊನಾ ಸೋಂಕಿನ ಲಕ್ಷಣ ಇರುವವರು ಹಾಗೂ ಇಲ್ಲದ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಆರೈಕೆ ಕೇಂದ್ರಕ್ಕೆ ಪ್ರವೇಶಿಸಲು ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತಾ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು.