ಮೈಸೂರು, ಜು.18 (DaijiworldNews/MB) : ರಾಜಸ್ಥಾನದಲ್ಲಿನ ರಾಜಕೀಯ ಬೆಳವಣಿಗೆಗೆ ನಾವೇ ಮಾದರಿ. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಆಪರೇಷನ್ ಕಮಲವನ್ನು ಮಾಜಿ ಸಚಿವ ಹೆಚ್.ವಿಶ್ವನಾಥ್ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರಾಜಸ್ಥಾನದಲ್ಲಿನ ರಾಜಕೀಯ ಬೆಳವಣಿಗೆಗೆ ನಾವೇ ಮಾದರಿಯಾಗಿದ್ದು ಮೊದಲು ಆಡಳಿತ ಪಕ್ಷದ ವಿರುದ್ದ ನಿಂತದ್ದು ಕರ್ನಾಟಕದಲ್ಲೇ. ಇಂತಹ ನಡೆಯಿಂದ ಜನತಂತ್ರ ವ್ಯವಸ್ಥೆಗೆ ಒಂದು ಬೆಲೆ ಬರುತ್ತದೆ. ಒಬ್ಬ ಜನಪ್ರತಿನಿಧಿಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳಿದರು.
ಆಪರೇಷನ್ ಕಮಲವನ್ನು ಮತ್ತಷ್ಟು ಸಮರ್ಥಿಸಿಕೊಂಡ ಅವರು, ಇತ್ತೀಚೆಗೆ ವಿರೋಧ ಪಕ್ಷದಿಂದ ಆಡಳಿತ ಪಕ್ಷಕ್ಕೆ ಯಾರೂ ಕೂಡಾ ಹೋಗುತ್ತಿಲ್ಲ. ಆಡಳಿತ ಪಕ್ಷದಿಂದಲ್ಲೇ ವಿರೋಧ ಪಕ್ಷಕ್ಕೆ ಹೋಗುತ್ತಾರೆ. ಅದನ್ನು ಪಕ್ಷಾಂತರ ಎಂದು ಹೇಳಲಾಗದು. ಅದಕ್ಕಾಗಿ ಶಿಕ್ಷೆ ನೀಡಬೇಕಾಗಿಲ್ಲ. ಅಂತಹ ಅಪರಾಧವೇನು ಅಲ್ಲ ಎಂದು ಹೇಳಿದರು.
ಹಾಗೆಯೇ ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ವಯಸ್ಸಿನ ಯುವಕರನ್ನು ತುಳಿಯುವ ಕಾರ್ಯವಾಗುತ್ತಿದೆ. ರಾಜಸ್ತಾನದ ರಾಜಕೀಯದ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯಬೇಕು ಎಂದು ಆರೋಪಿಸಿದರು.
ಇನ್ನು ರಾಜಸ್ತಾನದಲ್ಲಿ ಸರ್ಕಾರ ಉರುಳಿಸಲು ಶಾಸಕರ ಖರೀದಿ ವಿಚಾರಕ್ಕೆ ಸಂಬಂಧಿಸಿ ನಡೆದಿದೆ ಎನ್ನಲಾದ ಸಂಭಾಷಣೆಯ ಧ್ವನಿಮುದ್ರಣವನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿದ್ದು ಈ ಬಗ್ಗೆ ದಾಖಲಾದ ಎಫ್ಐಆರ್ನಲ್ಲಿ ಗಜೇಂದ್ರ ಸಿಂಗ್, ಭವರ್ಲಾಲ್ ಶರ್ಮಾ ಹಾಗೂ ಸಂಜಯ್ ಜೈನ್ ಹೆಸರಿತ್ತು. ಈ ಪೈಕಿ ಸಂಜಯ್ ಜೈನ್ನ್ನು ಬಂಧಿಸಲಾಗಿದೆ.