ನವದೆಹಲಿ, ಜು.18 (DaijiworldNews/MB) : ಬಾಬಾರಾಮ್ದೇವ್ ಅವರ ಕಂಪನಿ ಪತಂಜಲಿಯ ಕೊರೊನಿಲ್ ಔಷಧಿಗೆ ಕಂಟಕ ಬೆಂಬಿಡದೆ ಕಾಡುತ್ತಿದ್ದು ಇದೀಗ ಬ್ರ್ಯಾಂಡ್ನೇಮ್ ಕೊರೊನಿಲ್ ಎಂಬ ಬಳಕೆಯನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಜು.30ರವರೆಗೆ ಅನ್ವಯವಾಗುವಂತೆ ಮಧ್ಯಂತರ ಆದೇಶ ಹೊರಡಿಸಿದೆ.
ಕೊರೊನಾಗೆ ಔಷಧಿ ಕೊರೊನಿಲ್ನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ರಾಮ್ದೇವ್ ಕಂಪೆನಿ ಪತಂಜಲಿ ಹೇಳಿಕೊಂಡಾಗ ಸರ್ಕಾರ ಈ ಔಷಧವನ್ನು ಪ್ರಯೋಗ ಮಾಡಿಲ್ಲ ಹಾಗೂ ಮಾರಾಟಕ್ಕೆ ಅನುಮತಿಯನ್ನೂ ಪಡೆದಿಲ್ಲ ಎಂದು ಈ ಔಷಧಿಗೆ ನಿಷೇಧ ಹೇರಿತ್ತು. ಬಳಿಕ ಬಾಬಾರಾಮ್ದೇವ್ ನಾವು ಆ ರೀತಿ ಹೇಳೆ ಇಲ್ಲ, ಇದು ನಮ್ಮ ವಿರುದ್ಧದ ಷಡ್ಯಂತ್ರ ಎಂದು ಹೇಳಿಕೊಂಡಿದ್ದರು. ಬಳಿಕ ಇದನ್ನು 'ರೋಗನಿರೋಧಕ ಶಕ್ತಿ ವರ್ಧಕ' ಎಂದು ಮಾರಾಟಕ್ಕೆ ಆಯುಷ್ ಇಲಾಖೆ ಅನುಮತಿ ನೀಡಿತ್ತು.
ತಮಿಳುನಾಡಿನ ಚೆನ್ನೈ ಮೂಲದ ರಾಸಾಯನಿಕಗಳ ತಯಾರಿಕಾ ಸಂಸ್ಥೆ ಆರೂಢ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು 1993ರಲ್ಲೇ ಈ ಕೊರೊನಿಲ್ ಎಂಬ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದು ರಾಸಾಯನಿಕ ಹಾಗೂ ಬೃಹತ್ ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸುವ ಸ್ಯಾನಿಟೈಸರ್ಗಳನ್ನು ಉತ್ಪಾದನೆ ಮಾಡುತ್ತಿದೆ. ಕೊರೊನಿಲ್ 213 ಎಸ್ಪಿಎಲ್ ಮತ್ತು ಕೊರೊನಿಲ್ 92ಬಿ ಎಂಬ ಹೆಸರಿನಲ್ಲಿ ಈ ಉತ್ಪಾದನವನ್ನು ಮಾರಾಟ ಮಾಡುತ್ತಿದೆ. ಹಾಗೆಯೇ ಟ್ರೇಡ್ಮಾರ್ಕ್ ಬಳಕೆಯ ಅನುಮತಿಯನ್ನು ನವೀಕರಿಸಿಕೊಂಡಿದೆ. ಈ ನಿಟ್ಟಿನಲ್ಲಿ ಈ ಕಂಪೆನಿಯು ಪತಂಜಲಿ ಸಂಸ್ಥೆಯಿಂದ ಈ ಹೆಸರಿನ ಬಳಕೆಗೆ ತಡೆಯೊಡ್ಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು ಮದ್ರಾಸ್ ಹೈಕೋರ್ಟ್ ಈ ಬ್ಯಾಂಡ್ನೇಮ್ನ ಬಳಕೆಗೆ ನಿಷೇಧಿಸಿದೆ.
ನಾವು ಹಾಗೂ ಪತಂಜಲಿ ಸಂಸ್ಥೆ ಉತ್ಪಾದನೆ ಮಾಡುವ ಉತ್ಪನ್ನಗಳು ಬೇರೆ ಬೇರೆಯಾಗಿದ್ದರೂ ಕೂಡಾ ಬ್ರ್ಯಾಂಡ್ನೇಮ್ ಒಂದೇ ಆಗಿದೆ. ಇದರಿಂದಾಗಿ ನಮ್ಮ ಬೌದ್ಧಿಕ ಆಸ್ತಿಯ ಹಕ್ಕಿಗೆ ಧಕ್ಕೆ ಉಂಟಾಗುತ್ತದೆ ಎಂದು ಆರೂಢ ಕಂಪನಿ ವಾದಿಸಿದೆ.