ಬೆಂಗಳೂರು ಜು 18 (Daijiworld News/MSP): ಯಾವುದೇ ಕಾರಣಕ್ಕೂ ವೈದ್ಯರು ಭಯ ಪಡದೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ, ಸಾರ್ವಜನಿಕರಲ್ಲಿ ಧೈರ್ಯ ತುಂಬಬೇಕು. ಇದಕ್ಕಾಗಿ, ಪ್ರತಿ ವಾರ್ಡ್ಗಳಲ್ಲಿ ಆಸ್ಪತ್ರೆಗಳಿಗೆ ಬೇಕಾಗುವ ವ್ಯಾನ್, ಬೆಡ್ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಸರ್ಕಾರ ನೀಡಲಿದೆ ಎಂದು ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಸಚಿವರು ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅವರು ಭರವಸೆ ನೀಡಿದರು.
ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ವ್ಯಾಪ್ತಿಯಲ್ಲಿ ಕೋವಿಡ್ -19ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಂದು ನಗರದ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಕೋವಿಡ್ ಆಸ್ಪತ್ರೆ, ವಾರ್ ರೂಂ ಹಾಗೂ ಫೀವರ್ ಕ್ಲಿನಿಕ್ ಗಳ ಸ್ಥಳ ಪರಿಶೀಲನೆ ಕೈಗೊಂಡು ಅವರು ಮಾತನಾಡಿದರು.
ಕೋವಿಡ್ ಚಿಕಿತ್ಸೆಯಲ್ಲಿ ಬಡವರಿಗೆ ಆದ್ಯತೆ ಮೇಲೆ ನೆರವು ನೀಡಿ. ಸಾರ್ವಜನಿಕರಿಗೆ ಕೋವಿಡ್ -೧೯ ಬಗ್ಗೆ ವಾಸ್ತವಾಂಶ ತಿಳಿಸುವುದರೊಂದಿಗೆ, ಯಾವುದೇ ರೀತಿಯ ಭಯ ಹುಟ್ಟಿಸದಂತೆ ಎಚ್ಚರ ವಹಿಸುವಂತೆ ವೈದ್ಯಕೀಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೋರಿದ ಸಚಿವರು ಕೋವಿಡ್ ವೈರಸ್ ನ ಸೂಕ್ಷ್ಮತೆ ಅರ್ಥಮಾಡಿಕೊಂಡು ಅದರ ವಿರುದ್ಧ ನಾವೆಲ್ಲ ಒಟ್ಟಾಗಿ ಹೋರಾಡಬೇಕು ಎಂದು ಕರೆ ಕೊಟ್ಟರು.
ನಂತರ ಪುಲಿಕೇಶಿನಗರ, ಸಿ.ವಿ.ರಾಮನ್ ನಗರದ ಕೋವಿಡ್ ಆಸ್ಪತ್ರೆ, ವಾರ್ ರೂಂ ಹಾಗೂ ಫೀವರ್ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಎಲ್ಲರೂ ಸಾಮಾಜಿಕ ಅಂತರ ಹಾಗೂ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.