ಬೆಂಗಳೂರು, ಜು 18 (DaijiworldNews/PY): ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುವುದು ಹಾಗೂ ಸೋಂಕಿಗೆ ಹೆಚ್ಚಾಗಿ ಸಾವನ್ನಪ್ಪುತ್ತಿರುವುದು ವಯೋಮಾನದ ವೃದ್ದರು. ಈ ನಿಟ್ಟಿನಲ್ಲಿ ಅವರನ್ನು ಅವರನ್ನು ಪೂರ್ತಿಯಾಗಿ ತಪಾಸಣೆಗೆ ಒಳಪಡಿಸಲು ಬಿಬಿಎಂಪಿ ಮುಂದಾಗಿದೆ.
ಕೊರೊನಾದಿಂದ ಹಿರಿಯ ಜೀವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮೊಬೈಲ್ ತಂಡವೊಂದನ್ನು ಸಿದ್ದಪಡಿಸಿದೆ. ಹಿರಿಯ ನಾಗರಿಕರನ್ನು ಪರೀಕ್ಷೆಗೆ ಒಳಪಡಿಸಲು ಈ ಮೊಬೈಲ್ ತಂಡವು ಅವರ ಮನೆ ಬಾಗಿಲಿಗೆ ತೆರಳಲಿದ್ದು, ಅಲ್ಲಿ ಅವರ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೆ ಸ್ಯಾಂಪಲ್ ಅನ್ನು ಸಂಗ್ರಹಿಸಿ ಕೂಡಲೇ ಫಲಿತಾಂಶವನ್ನು ಸಹ ನೀಡಲಿದೆ.
ಬಿಬಿಎಂಪಿಯ ಈ ನೂತನ ವ್ಯವಸ್ಥೆಗೆ 115 ತಂಡಗಳನ್ನು ರಚಿಸಿದ್ದು, ಈ ತಂಡಗಳು ಪ್ರತಿದಿನ ಹಿರಿಯ ನಾಗರಿಕರನ್ನು ಸಂಪರ್ಕಿಸಿ ಅವರನ್ನು ಟೆಸ್ಟ್ಗೆ ಒಳಪಡಿಸಿ ಕೆಲವೇ ಗಂಟೆಗಳಲ್ಲಿ ಟೆಸ್ಟ್ನ ವರದಿಯನ್ನು ನೀಡುವಂತ ಕಾರ್ಯವನ್ನು ಮಾಡಲಿದೆ. ಬೆಂಗಳೂರಿನಲ್ಲಿ ಸುಮಾರು 20 ಲಕ್ಷದಷ್ಟು ಹಿರಿಯ ನಾಗರಿಕರು ಇದ್ದಾರೆ ಎಂದು ಅಂದಾಜಿಸಲಾಗಿದೆ.
ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯ ಸಲುವಾಗಿ 8 ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದ್ದು, ನೋಡಲ್ ಅಧಿಕಾರಿಗಳು ಪ್ರತಿಯೊಂದು ಕಂಟ್ರೋಲ್ ರೂಂನ ನಿರ್ವಹಣೆಗೆಂದು ನಿಯೋಜನೆಯಾಗಲಿದ್ದಾರೆ. ಇನ್ನು ಸ್ವಯಂಸೇವಕರು ನೋಡಲ್ ಅಧಿಕಾರಿಯ ಉಸ್ತುವಾರಿಯ ಪ್ರಕಾರ ಕಾರ್ಯನಿರ್ವಹಿಸಲಿದ್ದು, ಸೋಂಕು ಲಕ್ಷಣಗಳು ಕಂಡುಬಂದವರ ಮನೆಗೆ ತೆರಳಿ ಟೆಸ್ಟ್ ಮಾಡಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಹಿರಿಯ ನಾಗರಿಕರ ಆರೋಗ್ಯದ ದೃಷ್ಠಿಯಿಂದ ಅವರ ಮನೆ ಬಾಗಿಲಲ್ಲೇ ಅವರನ್ನು ಸಂಪರ್ಕಿಸಿ ಗಂಟಲು ದ್ರವ ಮಾದರಿಯನ್ನು ಪಡೆದುಕೊಂಡು ಅಲ್ಲಿಯೇ ಪರೀಕ್ಷೆಯನ್ನೂ ಕೂಡಾ ನಡೆಸಲಿದ್ದಾರೆ.
ವೃದ್ದರು ಹಾಗೂ ಸಣ್ಣ ಮಕ್ಕಳಲ್ಲಿ ರೋಗ ನಿರೋಧಕ ಶಕ್ತ ಕಡಿಮೆ ಇರುವ ಕಾರಣ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿವೆ. ಅಲ್ಲದೇ, ಕೊರನಾ ಸೋಂಕಿಗೆ ಹೆಚ್ಚು ಬಲಿಯಾದವರು ವೃದ್ದರೇ ಆಗಿರುವ ಕಾರಣ ಬಿಬಿಎಂಪಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಪ್ರಸ್ತುತ ರಚಿಸಲಾಗಿರುವ 115 ತಂಡಗಳಿಗಿಂತ ಹೆಚ್ಚಿನ ಅವಶ್ಯಕತೆ ಕಂಡುಬಂದಲ್ಲಿ, ತಂಡದ ಸಂಖ್ಯೆಯನ್ನು ಹೆಚ್ಚು ಮಾಡುವಂತ ಯೋಜನೆಯನ್ನು ಸಹ ಮಾಡಿದೆ.