ನವದೆಹಲಿ, ಜು 19 (DaijiworldNews/PY): ಭಾರತ- ಚೀನಾ ಗಡಿ ಸಮಸ್ಯೆಗೆ ವಿಚಾರದ ಬಗ್ಗೆ ಕೇಂದ್ರ ಸರ್ಕಾರದ ಹೇಡಿತನದ ಕ್ರಮಗಳಿಂದಾಗಿ ಭಾರತವು ಭಾರಿ ಬೆಲೆ ತೆರಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ. ಭಾರತ ಸರ್ಕಾರವು ಚೇಂಬರ್ಲೇನ್ನಂತೆ ವರ್ತಿಸುತ್ತಿದೆ. ಇದು ಚೀನಾವನ್ನು ಮತ್ತಷ್ಟು ಧೈರ್ಯಗೊಳಿಸುತ್ತದೆ ಎಂದಿದ್ದಾರೆ.
ಟ್ವೀಟ್ನಲ್ಲಿ ರಾಹುಲ್ ಗಾಂಧಿ ಅವರು ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್ಗೆ ತೆರಳಿದ್ದ ಸಂದರ್ಭ ಮಾಡಿದ ಭಾಷಣವನ್ನು ಟ್ಯಾಗ್ ಮಾಡಿದ್ದಾರೆ.
ಈ ಭಾಷಣದಲ್ಲಿ ರಾಜನಾಥ್ ಸಿಂಗ್ ಅವರು, ವಿಶ್ವದ ಯಾವುದೇ ಶಕ್ತಿಯು ನಮ್ಮ ದೇಶದ ಒಂದಿಂಚು ಜಾಗವನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಬಲವಾದ ಸಂದೇಶವನ್ನು ರವಾನಿಸಿದ್ದರು.
ಇದಕ್ಕೂ ಮೊದಲು ಶುಕ್ರವಾರ ಕೇಂದ್ರವನ್ನು ಪ್ರಶ್ನೆ ಮಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರವಾದ ಪ್ರಮಾದಗಳು ಭಾರತವನ್ನು ಹಾಗೂ ನಮ್ಮನ್ನೂ ದುರ್ಬಲಗೊಳಿಸಿವೆ. ಮೋದಿ ಸರ್ಕಾರ ಚೀನಾ ಗಡಿಯಲ್ಲಿನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದೆ ಎಂದಿದ್ದರು.