ಬೆಂಗಳೂರು, ಜು.19 (DaijiworldNews/MB) : ರಾಜಸ್ತಾನದಲ್ಲು ರಾಜಕೀಯ ಬಿಕ್ಕಟ್ಟು ಮತ್ತಷ್ಟು ಹದಗಡುತ್ತಿದ್ದು ಈಗ ಬಂಡಾಯವೆದ್ದು ಹರಿಯಾಣದ ರೆಸಾರ್ಟ್ನಲ್ಲಿದ್ದ ರಾಜಸ್ಥಾನದ 18 ಮಂದಿ ಬಂಡಾಯ ಶಾಸಕರು ಏಕಾಏಕಿ ಬೆಂಗಳೂರಿಗೆ ಸ್ಥಳಾಂತರವಾಗಿದ್ದಾರೆ ಎಂದು ವರದಿಯಾಗಿದೆ.
ಈ 18 ಮಂದಿ ಬಂಡಾಯ ಶಾಸಕರು ಎರಡು ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಆಗಮಿಸಿದ್ದು ನಗರದ ಹೊರವಲಯದ ರೆಸಾರ್ಟ್ವೊಂದರಲ್ಲಿ ಇದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಆರೋಪ ಮಾಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಕಾಂಗ್ರೆಸ್ ಬಿಡುಗಡೆ ಮಾಡಿದ ಆಡಿಯೋದಲ್ಲಿ ಬಂಡಾಯ ಶಾಸಕ ಭನ್ವರ್ಲಾಲ್ ಶರ್ಮಾ ಧ್ವನಿಯೂ ಇದ್ದು ಈ ಕಾರಣ ಧ್ವನಿ ಮಾದರಿ ಸಂಗ್ರಹಕ್ಕೆ ರಾಜಸ್ಥಾನ ಪೊಲೀಸರು ಶುಕ್ರವಾರ ರಾತ್ರಿಯೇ ಹರಿಯಾಣದ ಮನೇಸಾರ್ಗೆ ತೆರಳಿದ್ದರು. ರೆಸಾರ್ಟ್ನ ಹೊರಗಡೆ ರಾಜಸ್ಥಾನ ಪೊಲೀಸರನ್ನು ಸುಮಾರು ಒಂದು ತಾಸು ಕಾಯಿಸಿದ ಹರಿಯಾಣ ಪೊಲೀಸರು ಬಳಿಕ ಒಳಹೋಗಲು ಅವಕಾಶ ನೀಡಿದ್ದಾರೆ. ಅಷ್ಟರಲ್ಲಿ ರೆಸಾರ್ಟ್ನಲ್ಲಿದ್ದ ಶಾಸಕರು ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಹರಿಯಾಣ ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ದೂರಿದ್ದಾರೆ.
ಇತ್ತ ಭಾರತೀಯ ಟ್ರೈಬಲ್ ಪಾರ್ಟಿಯ (ಬಿಟಿಪಿ) ಇಬ್ಬರು ಶಾಸಕರು ರಾಜಸ್ತಾನ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜಭವನಕ್ಕೆ ತೆರಳಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿಯಾಗಿ ತನಗೆ 102 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಆಡಿಯೋ ಪ್ರಕರಣ ಸಂಬಂಧ ಶುಕ್ರವಾರ ಬಂಧಿತನಾಗಿದ್ದ ಸಂಜಯ್ ಜೈನ್ನನ್ನು ಜೈಪುರ ಕೋರ್ಟ್ 4 ದಿನ ಪೊಲೀಸ್ ವಶಕ್ಕೊಪ್ಪಿಸಿದೆ.