ಬೆಂಗಳೂರು, ಜು 19 (DaijiworldNews/PY): ಕೊರೊನಾ ಸೋಂಕಿನ ಜೊತೆ ಸರ್ಕಾರದ ಭ್ರಷ್ಟಾಚಾರವೂ ನಿಯಂತ್ರಣ ತಪ್ಪಿ ಹೆಚ್ಚುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಕೊರೊನಾ ಸೋಂಕಿನ ಜೊತೆ ಸರ್ಕಾರದ ಭ್ರಷ್ಟಾಚಾರವೂ ನಿಯಂತ್ರಣ ತಪ್ಪಿ ಹೆಚ್ಚುತ್ತಿದೆ. ಮೂರುಪಟ್ಟು ಹೆಚ್ಚು ದರ ಕೊಟ್ಟು ವೆಂಟಿಲೇಟರ್ ಖರೀದಿ ಮಾಡಿದ ಕರ್ಮಕಾಂಡವನ್ನು ಪತ್ರಿಕೆ ವರದಿ ಮಾಡಿದೆ. ಜನರ ತೆರಿಗೆ ಹಣ ಲೂಟಿಯಾಗುವುದನ್ನು ನೋಡುತ್ತಾ ಸುಮ್ಮನಿದ್ದು ಸರ್ಕಾರಕ್ಕೆ ಸಹಕಾರ ನೀಡಲೇ? ಮುಖ್ಯಮಂತ್ರಿಯವರೇ ಎಂದು ಕೇಳಿದ್ದಾರೆ.
ಕೆಎಸ್ಆರ್ಟಿಸಿ ನೌಕರರಿಗೆ 17 ದಿನ ಕಳೆದರೂ ಸರ್ಕಾರ ಈ ತಿಂಗಳ ಸಂಬಳ ನೀಡಿಲ್ಲ. ಇದರಿಂದ ಒಂದುಕಾಲು ಲಕ್ಷ ನೌಕರರ ಕುಟುಂಬಗಳು ಕೊರೊನಾ ಹಾವಳಿ ಜೊತೆಯಲ್ಲಿ ಜೀವನ ನಿರ್ವಹಣೆಗಾಗಿಯೂ ಪರದಾಡುವಂತಾಗಿದೆ. ಈ ನೌಕರರಿಗೆ ತಕ್ಷಣ ಸಂಬಳ ನೀಡುವಂತೆ ಮುಖ್ಯಮಂತ್ರಿ ಅವರನ್ನು ಆಗ್ರಹಿಸುತ್ತಿದ್ದೇನೆ ಎಂದಿದ್ದಾರೆ.