ನವದೆಹಲಿ, ಜು.20 (DaijiworldNews/MB) : ''ಕೆಲವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದರೆ ದೇಶದಲ್ಲಿ ಕೊರೊನಾ ಸೋಂಕು ನಿರ್ಮೂಲನೆಯಾಗುತ್ತದೆ ಎಂದು ಭಾವಿಸಿದ್ದಾರೆ'' ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಲೇವಡಿ ಮಾಡಿದ್ದಾರೆ.
ಆಗಸ್ಟ್ 3 ಅಥವಾ 5ರಂದು ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಬಹುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದ್ದು ಇದರ ಬೆನ್ನಲ್ಲೇ ಹೇಳಿಕೆ ನೀಡಿರುವ ಶರದ್ ಪವಾರ್, ''ಅಯೋಧ್ಯೆಯಲ್ಲಿ ರಾಮ ನಿರ್ಮಾಣ ಮಾಡಿದರೆ ಕೊರೊನಾ ಸೋಂಕು ನಿರ್ಮೂಲನೆಯಾಗುತ್ತೆ ಎಂದು ಕೆಲವರು ಭಾವಿಸಿದ್ದಾರೆ'' ಎಂದು ವ್ಯಂಗ್ಯ ಮಾಡಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಾಮಮಂದಿರದ ಶಂಕು ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದೆ.
ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ದಕ್ಷಿಣ ಮುಂಬೈನ ಶಿವಸೇನಾ ಸಂಸದ ಅರವಿಂದ್ ಸಾವಂತ್, ಶ್ರೀ ರಾಮ ನಮ್ಮ ಪಕ್ಷದ ನಂಬಿಕೆಯ ವಿಷಯವಾಗಿದ್ದು ಇದನ್ನು ರಾಜಕೀಯಗೊಳಿಸಲು ಬಯಸಲ್ಲ. ಮಹಾರಾಷ್ಟ್ರ ಸರ್ಕಾರ ಕೊರೊನಾ ವಿರುದ್ಧದ ಹೋರಾಟವನ್ನು ಉತ್ತಮವಾಗಿ ನಡೆಸುತ್ತಿದೆ ಎಂದು ಹೇಳಿದ್ದಾರೆ.