ನವದೆಹಲಿ, ಜು.20 (DaijiworldNews/MB) : ದೇಶದಲ್ಲಿ ಮೊದಲ ಖಾಸಗಿ ರೈಲು ಸಂಚಾರ 2023ಕ್ಕೆ ಆರಂಭವಾಗಲಿದ್ದು 2027 ರ ವೇಳೆಗೆ ಸುಮಾರು 151 ಖಾಸಗಿ ರೈಲುಗಳು ಸಂಚರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮೊದಲ ಹಂತದಲ್ಲಿ 2023ರಲ್ಲಿ 12 ಖಾಸಗಿ ರೈಲುಗಳನ್ನು ಸಂಚರಿಸಲಿದ್ದು ಈ ರೈಲುಗಳು ಇನ್ನೂ 45 ಮಾರ್ಗಗಳಲ್ಲಿ ಟೈಮ್ಲೈನ್ ಪ್ರಕಾರವಾಗಿ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಗಳಿಗೂ ಪ್ರಯಾಣಿಕರ ರೈಲು ಆರಂಭಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆಯ ಜಾರಿಗೆ ಈ ತಿಂಗಳ ಆರಂಭದಲ್ಲಿ ರೈಲ್ವೆಯು ದೇಶದಲ್ಲಿ 109 ಜೋಡಿ ಮಾರ್ಗಗಳಲ್ಲಿ 151 ಆಧುನಿಕ ಪ್ರಯಾಣಿಕ ರೈಲುಗಳ ಸಂಚಾರ ಆರಂಭಿಸಲು ಕಂಪನಿಗಳಿಂದ ಪ್ರಸ್ತಾವನೆಯನ್ನು ಆಹ್ವಾನ ಮಾಡಿದ್ದು ಇದೀಗ 2023ರಲ್ಲಿ 12 ಖಾಸಗಿ ರೈಲುಗಳನ್ನು ಸಂಚರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 2022-23ರಲ್ಲಿ 12, 2023-2024ರಲ್ಲಿ 45, 2025-26ರಲ್ಲಿ 50 ಮತ್ತು ಅಂತಿಮವಾಗಿ 2026-2027ರ ಅಂತ್ಯದಲ್ಲಿ 151 ಖಾಸಗಿ ರೈಲುಗಳು ಸಂಚಾರ ಆರಂಭಿಸಲಿದೆ ಎಂದು ಹೇಳಿದ್ದಾರೆ.
ಆರ್ಎಫ್ಕ್ಯೂ ಜುಲೈ 8 ರಂದು ಆರಂಭವಾಗಿದ್ದು ನವೆಂಬರ್ನಲ್ಲಿ ಅಂತ್ಯವಾಗುವ ಸಾಧ್ಯತೆಯಿದೆ. 2021 ರ ಮಾರ್ಚ್ನಲ್ಲಿ ಬಿಡ್ ತೆರೆಯಲಾಗುವುದು. 2021 ರ ಏಪ್ರಿಲ್ 31 ರ ಒಳಗೆ ಬಿಡ್ದಾರರ ಆಯ್ಕೆ ಮಾಡುವ ಕುರಿತಾಗಿ ಯೋಜನೆ ರೂಪಿಸಲಾಗಿದೆ. ಲಭಿಸುವ ಆಧಾಯದಲ್ಲಿ ಹೆಚ್ಚಿನ ಪಾಲು ಉಲ್ಲೇಖಿಸುವ ಬಿಡ್ದಾರರಿಗೆ ಯೋಜನೆಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.