ಪಾಟ್ನಾ, ಜು 20 (Daijiworld News/MSP): ಭಾರತದೊಂದಿಗೆ ಗಡಿ ತಕರಾರು ತೆಗೆದು ಹೊಸ ಗಡಿ ನಕ್ಷೆಯನ್ನು ಬಿಡುಗಡೆ ಮಾಡಿದ್ದ ನೇಪಾಳ ಇದೀಗ ಮತ್ತೊಮ್ಮೆ ತನ್ನ ಉದ್ಧಟನ ಮೆರೆದಿದೆ. ಬಿಹಾರ ರಾಜ್ಯದ ಕಿಶನ್ ಗಂಜ್ ಗಡಿಭಾಗದಲ್ಲಿ ಭಾರತೀಯ ನಾಗರಿಕರ ಮೇಲೆ ನೇಪಾಳ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಓರ್ವ ಭಾರತೀಯ ಗಾಯಗೊಂಡಿದ್ದಾನೆ.
ಗಾಯಗೊಂಡ ಭಾರತೀಯ ಪ್ರಜೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಕಿಶಂಗಂಜ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಭಾನುವಾರ ಕಿಶನ್ ಗಂಜ್ ಗಡಿ ಪ್ರದೇಶದಲ್ಲಿ ಮೂವರು ಭಾರತೀಯರ ಮೇಲೆ ನೇಪಾಳಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದು, ಓರ್ವ ಗಾಯಗೊಂಡಿದ್ದಾರೆ.
ನೇಪಾಳ ಒಂದು ತಿಂಗಳ ಅಂತರದಲ್ಲಿ ನಡೆಸಿದ ಎರಡನೇ ಗುಂಡಿನ ದಾಳಿ ಇದಾಗಿದೆ. ಇತ್ತೀಚೆಗೆ ತಾನೆ ಸೀತಾಮಡಿ ಎಂಬ ಪ್ರದೇಶದಲ್ಲಿ ನೇಪಾಳ ಪೊಲೀಸರ ದಾಳಿಗೆ ಓರ್ವ ಭಾರತೀಯ ಬಲಿಯಾಗಿದ್ದು ಇಬ್ಬರು ಗಾಯಗೊಂಡಿದ್ದರು.