ಬೆಂಗಳೂರು, ಜು.20 (DaijiworldNews/MB) : ಕೊರೊನಾ ಆತಂಕದ ನಡುವೆಯೂ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಶೇ. 89ರಷ್ಟು ಪೂರ್ಣವಾಗಿದ್ದು ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ಲಭಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಬಹುತೇಕವಾಗಿ ಪೂರ್ಣವಾಗಿದೆ. ಲಾಕ್ಡೌನ್ ಕಾರಣದಿಂದಾಗಿ ಬೆಂಗಳೂರಿನ ಎರಡು ಜಿಲ್ಲೆಗಳಲ್ಲಿ ಮೌಲ್ಯಮಾಪನ ಆರಂಭ ತಡವಾಗಿದೆ. ಬೇರೆ ಎಲ್ಲಾ ಜಿಲ್ಲೆಗಳ ಮಾಹಿತಿ ಪಡೆಯುತ್ತಿದ್ದು ಆಗಸ್ಟ್ ಮೊದಲ ವಾರದಲ್ಲೇ ಫಲಿತಾಂಶ ಪ್ರಕಟಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಜೂನ್ 25ರಿಂದ ಜುಲೈ 3ರ ವರೆಗೆ ಕೊರೊನಾ ಭೀತಿಯ ನಡುವೆಯೂ ಪರೀಕ್ಷೆ ನಡೆದಿದ್ದು ಈಗಲೂ ಕೊರೊನಾ ಭೀತಿಯ ನಡುವೆಯೇ ಮೌಲ್ಯಮಾಪನ ನಡೆಯುತ್ತಿದೆ. ಈಗಾಗಲೇ ಮೈಸೂರು, ಧಾರವಾಡ ಹಾಗೂ ಕಲಬುರಗಿಯಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣವಾಗಿದ್ದು ಉಳಿದಿರುವ ಶೇ.11ರಷ್ಟು ಮೌಲ್ಯಮಾಪನ ಜುಲೈ 22 ಅಥವಾ 23ರೊಳಗೆ ಪೂರ್ಣವಾಗಲಿದೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಕೊರೊನಾ ಸೋಂಕಿನ ಆತಂಕದ ನಡುವೆಯೂ ಮೌಲ್ಯಮಾಪನ ಇಷ್ಟು ವೇಗವಾಗಿ ನಡೆದದ್ದು ಹೇಗೆ ಎಂಬ ವಿಚಾರದಲ್ಲಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಮಂಡಳಿಯ ನಿರ್ದೇಶಕಿ ವಿ. ಸುಮಂಗಳಾ ಅವರು, ಮೌಲ್ಯಮಾಪಕರಿಗಾಗಿ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು ಆನ್ಲೈನ್ನಲ್ಲಿ ಅಂಕಗಳನ್ನು ನಮೂದಿಸುವ ಸಂದರ್ಭದಲ್ಲೂ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಸುಮಾರು 71 ಸಾವಿರ ಮೌಲ್ಯಮಾಪಕರ ಪೈಕಿ 68 ಸಾವಿರ ಮೌಲ್ಯಮಾಪಕರು ತೊಡಗಿದ್ದಾರೆ ಎಂದು ಹೇಳಿದ್ದಾರೆ.
ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಮೌಲ್ಯಮಾಪನವು ವಿಳಂಭವಾಗಬಹುದು ಎಂಬುದು ಹಲವರ ಅಭಿಪ್ರಾಯವಾಗಿತ್ತು. ಆದರೆ ಸರ್ಕಾರವು ಮೌಲ್ಯಮಾಪನವನ್ನು ಶೀಘ್ರವಾಗಿ ನಡೆಸುವ ನಿಟ್ಟಿನಲ್ಲಿ 51 ಹೆಚ್ಚುವರಿ ಮೌಲ್ಯಮಾಪನ ಕೇಂದ್ರಗಳನ್ನು ತೆರೆದಿದೆ.