ಬೆಂಗಳೂರು, ಜು 20 (Daijiworld News/MSP):ಡ್ರೋನ್ ತಯಾರಿಸಿದ್ದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ಮಂಡ್ಯ ಮೂಲದ ಎನ್.ಎಂ. ಪ್ರತಾಪ್ ವಿರುದ್ಧ ಎಫ್ ಐಆರ್ ದಾಖಲಿಸಿರುವ ಪೊಲೀಸರು, ಬಂಧನಕ್ಕೆ ವಿಶೇಷ ತಂಡವೊಂದನ್ನು ರಚಿಸಿ, ಹುಡುಕಾಟ ಆರಂಭಿಸಿದ್ದಾರೆ.
ಡ್ರೋನ್ ಪ್ರತಾಪ್ ಬಂಧನಕ್ಕಾಗಿ ಮೂರು ತಂಡಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ತಲಘಟ್ಟಪುರ ಪೊಲೀಸರು ಮತ್ತು ಬಿಬಿಎಂಪಿ ಹೋಂ ಕ್ವಾರಂಟೈನ್ ಸಿಟಿಜನ್ ಸ್ಕ್ವಾಡ್ ಪ್ರತಾಪ್ಗಾಗಿ ಹುಡುಕಾಟ ನಡೆಸುತ್ತಿದೆ. ಹಾಗೆಂದು ಇತನನ್ನು ಪೊಲೀಸರು ಹುಡುಕುತ್ತಿರುವುದು ಡ್ರೋನ್ ವಿಚಾರಕ್ಕೆ ಅಲ್ಲ. ಕೊವೀಡ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಇತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಪ್ರತಾಪ್ ಇದೇ ತಿಂಗಳ 15ರಂದು ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದು ಹೊರ ರಾಜ್ಯದಿಂದ ಬಂದ ನಿಯಮದ ಪ್ರಕಾರ ಆತ ತಲಘಟ್ಟಪುರದ ಅಪಾರ್ಟ್ ಮೆಂಟ್ ವೊಂದರಲ್ಲಿ ಹೋಂ ಕ್ವಾರಂಟೈನ್ ಆಗಿದ್ದ. ಆತನಿಗೆ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದ್ದ ಪ್ರತಾಪ್ ನಿಯಮ ಉಲ್ಲಂಘಿಸಿ ಮಾರನೇ ದಿನವೇ ಚಾನೆಲ್ ಒಂದರ ಸಂದರ್ಶನದಲ್ಲಿ ಭಾಗವಹಿಸಿದ್ದ.
ಸುಳ್ಳು ವಿಜ್ಞಾನಿ ಡ್ರೋನ್ ಪ್ರತಾಪ್ ಕ್ವಾರಂಟೈನ್ ನಿಯಮಗಳು ಉಲ್ಲಂಘಿಸಿರುವ ಕಾರಣ ಬಿಬಿಎಂಪಿ ಅಧಿಕಾರಿಗಳು ತಲಘಟ್ಟಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಡ್ಯ ಅಥವಾ ಚಿಕ್ಕಮಗಳೂರಿನಲ್ಲಿ ಇದ್ದಾನೆ ಎನ್ನಲಾಗಿದ್ದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.