ಬೆಂಗಳೂರು, ಜು. 20 (DaijiworldNews/MB) : ರಾಜ್ಯ ರಾಜದಾನಿ ಬೆಂಗಳೂರಿನಲ್ಲಿ ಕೊರೊನಾ ತನ್ನ ಕರಾಳ ಹಸ್ತವನ್ನು ವ್ಯಾಪಕವಾಗಿ ಚಾಚುತ್ತಲ್ಲೇ ಇದ್ದು ಆಂಬುಲೆನ್ಸ್ಗಳು ದೊರೆಯುವುದೇ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಕನಕಪುರ ರಸ್ತೆ ಫ್ಲ್ಯಾಟ್ ಮತ್ತು ಲೇಔಟ್ ನಿವಾಸಿಗಳು ತಮಗಾಗಿಯೇ ಪ್ರತ್ಯೇಕವಾಗಿ ಆಂಬುಲೆನ್ಸ್ ಒಂದನ್ನು 6 ತಿಂಗಳ ಅವಧಿಗೆ ಬಾಡಿಗೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್ ಸಂಘಟನೆಯ ಸಂಯೋಜಕ ಅಬ್ದುಲ್ ಅಲೀಂ, ಒಂದು ತಿಂಗಳ ಹಿಂದೆ 90 ವರ್ಷದ ವ್ಯಕ್ತಿಯೊಬ್ಬರಿಗೆ ಅನಾರೋಗ್ಯವಾಗಿದ್ದು ಆಂಬುಲೆನ್ಸ್ಗೆ ಕರೆ ಮಾಡಿದಾಗ ಒಂದು ಗಂಟೆ ತಡವಾಗಿ ಬಂದಿದೆ. ಅಷ್ಟರಲ್ಲೇ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆದಾದ ಕೆಲವು ದಿನಗಳ ನಂತರ ವ್ಯಕ್ತಿಯೊಬ್ಬರಿಗೆ ಹೃದಾಯಾಘಾತವಾಗಿದ್ದು ಇದೇ ರೀತಿ ತೊಂದರೆ ಉಂಟಾಯಿತು. ಅದಕ್ಕಾಗಿ ಈಗ ನಾವೇ ಪ್ರತ್ಯೇಕವಾಗಿ ಆಂಬುಲೆನ್ಸ್ ಒಂದನ್ನು ಆರು ತಿಂಗಳಿಗೆ ಬಾಡಿಗೆಗೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಸಾರಕ್ಕಿಯಿಂದ ನೈಸ್ ರಸ್ತೆ ಜಂಕ್ಷನ್ ನಡುವಿನ ಲೇಔಟ್ ಮತ್ತು ಅಪಾರ್ಟ್ಮೆಂಟ್ ನಿವಾಸಿಗಳ ಸಂಘಗಳು ಸೇರಿದಂತೆ ಸುಮಾರು 3,700 ಕುಟುಂಬಗಳು ಆಂಬುಲೆನಸ್ ಬಾಡಿಗೆ ಪಡೆಯುವುದಕ್ಕೆ ಒಪ್ಪಿಗೆ ಸೂಚಿಸಿದ್ದು ಈಗ ತಿಂಗಳಿಗೆ ಎರಡು ಲಕ್ಷದಂತೆ ಆಂಬುಲೆನ್ಸ್ ಬಾಡಿಗೆಗೆ ಪಡೆದಿದ್ದೇವೆ. ತಿಂಗಳಿಗೆ ಒಬ್ಬರಿಗೆ 60 ರೂ. ಆಗುತ್ತದೆ. ಆಂಬುಲೆನ್ಸ್ನಲ್ಲಿ ಯಾವುದೇ ಸಂದರ್ಭದಲ್ಲಿ ಚಾಲಕ ಹಾಗೂ ನರ್ಸ್ ಇರುತ್ತಾರೆ. ಹಾಗೆಯೇ ಆಂಬುಲೆನ್ಸ್ನಲ್ಲಿ ಎಲ್ಲಾ ಸೌಲಭ್ಯಗಳು ಇದೆ. ಕೊರೊನಾ ಶಂಕೆ ಅಥವಾ ಸೋಂಕಿತರಾದ್ದಲ್ಲಿ ಪಿಪಿಇ ಕಿಟ್ ಕೂಡಾ ಆಂಬುಲೆನ್ಸ್ನಲ್ಲಿ ಇದೆ. ಆಂಬುಲೆನ್ಸ್ನಲ್ಲಿ ಓರ್ವರನ್ನು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲೇ ಮತ್ತೊಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡಲ್ಲಿ ಈ ಆಂಬುಲೆನ್ಸ್ ಬಾಡಿಗೆ ಪಡೆದಿರುವ ಕಂಪೆನಿಯಿಂದಲ್ಲೇ ಮತ್ತೊಂದು ಆಂಬುಲೆನ್ಸ್ ಬಾಡಿಗೆಗೆ ದೊರೆಯಲಿದೆ ಎಂದು ಶ್ರೀವತ್ಸ ಎಂಬುವವರು ಹೇಳಿದ್ದಾರೆ.