ಹೈದರಾಬಾದ್, ಜು. 20 (DaijiworldNews/MB) : ಕೊರೊನಾ ಸೋಂಕು ಇರಬಹುದು ಎಂದು ಜನಿಸುವ ಮುನ್ನವೇ ಸಾವನ್ನಪ್ಪಿದ್ದ ಹೆಣ್ಣುಮಗುವಿನ ಅಂತ್ಯ ಸಂಸ್ಕಾರಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ತಂದೆ ತನ್ನ ಮಗುವಿನ ಶವವನ್ನೇ ನೀರಿನ ಕಾಲುವೆಯಲ್ಲಿ ಎಸೆದ ಘಟನೆ ಆಂಧ್ರಪ್ರದೇಶ ಕರ್ನೂಲು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಜಿಲ್ಲೆಯ ಸಿರಿವೆಲ್ಲಾ ಮಂಡಲದ ಕೋಟಪಾಡು ಗ್ರಾಮದ ಶಂಷೀರ್ ಶಾ ಅಲಿ ಎಂಬವರ ಗರ್ಭಿಣಿ ಪತ್ನಿ ಮದರ್ಬೀ ಎಂಬುವವರು ಮಗುವು ಹುಟ್ಟುವ ಮೊದಲು ಗರ್ಭದಲ್ಲೇ ಸಾವನ್ನಪ್ಪಿದ್ದು ಶುಕ್ರವಾರ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆದಿದ್ದಾರೆ. ಮಗುವಿನ ಅಂತ್ಯ ಸಂಸ್ಕಾರ ನಡೆಸಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ನೀರಿನ ಕಾಲುವೆಗೆ ತಂದೆಯೇ ಮಗುವಿನ ಶವವನ್ನು ಎಸೆದಿದ್ದು ಕರ್ನೂಲು–ಕಡಪ ನೀರಾವರಿ ಕಾಲುವೆಯಲ್ಲಿ ಮಗುವಿನ ಶವವನ್ನು ನೋಡಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ ಪೊಲೀಸರು ಮಗುವಿನ ಶವದ ಅಂತ್ಯ ಸಂಸ್ಕಾರ ಮಾಡುವಂತೆ ಪೋಷಕರಿಗೆ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ನಂದ್ಯಾಲ ತಾಲ್ಲೂಕು ಇನ್ಸ್ಟೆಪಕ್ಟರ್ ದಿವಾಕರ್ ರೆಡ್ಡಿ, ''ಗ್ರಾಮಸ್ಥರು ಕೊರೊನಾ ಭಯದಿಂದ ಮಗುವಿನ ಅಂತ್ಯ ಸಂಸ್ಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆ ದಿಕ್ಕು ತೋಚದೆ ಮಗುವಿನ ಶವವನ್ನು ಕಾಲುವೆಗೆ ಎಸೆದೆ ಎಂದು ತಂದೆ ಅಲಿ ತಿಳಿಸಿದ್ದಾರೆ. ಮಗುವಿಗೆ ಸೋಂಕು ಇದೆ ಎಂದು ವೈದ್ಯರು ತಿಳಿಸಿಲ್ಲ. ಆದರೆ ಈ ಪ್ರದೇಶದಲ್ಲಿ ಸೋಂಕು ಪ್ರಕರಣ ಅಧಿಕವಾಗಿರುವ ಕಾರಣದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿ ಮಗುವಿನ ಅಂತ್ಯ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಗುವನ್ನು ಕಳೆದುಕೊಂಡ ತಂದೆ ಅಲಿ ಅತ್ಯಂತ ದುಖಃದಲ್ಲಿದ್ದು ಆತನ ಪತ್ನಿಗೂ ಕಾಯಿಲೆಯಿದೆ. ಈ ಹಿನ್ನಲೆ ಆತನ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ'' ಎಂದು ತಿಳಿಸಿದ್ದಾರೆ.