ನವದೆಹಲಿ, ಜು. 20 (DaijiworldNews/MB) : ಕೊರೊನಾ ಸೋಂಕಿಗೆ ವಿಶ್ವದಾದ್ಯಂತ ಲಸಿಕೆ ಅಭಿವೃದ್ದಿ ಪಡಿಸಲಾಗುತ್ತಿದ್ದು ಭಾರತದ 7 ಫಾರ್ಮಾ ಸಂಸ್ಥೆಗಳೂ ಕೂಡಾ ಪೈಪೋಟಿಯಲ್ಲಿದ್ದು ಕೊರೊನಾಗೆ ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ತೊಡಗಿದೆ.
ಸಾಮಾನ್ಯವಾಗಿ ಯಾವುದೇ ಲಸಿಕೆಯನ್ನು ಪತ್ತೆಹಚ್ಚಬೇಕಾದರೆ ಒಂದು ವರ್ಷ ಬೇಕಾಗುತ್ತದೆ ಆದರೆ ಈಗ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿವಿಶ್ವದಾದ್ಯಂತ ಹಲವು ಸಂಸ್ಥೆಗಳು ಲಸಿಕೆ ಅಭಿವೃದ್ಧಿ ಪಡಿಸುತ್ತಿದ್ದು ಈ ಪೈಕಿ ಜಾಗತಿಕವಾಗಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಭಾರತ್ ಬಯೋಟೆಕ್, ಸೆರಮ್ ಇನ್ಸ್ಟಿಟ್ಯೂಟ್, ಝೈಡಸ್ ಕ್ಯಾಡಿಲಾ, ಪ್ಯಾನೇಸಿಯಾ ಬಯೋಟೆಕ್, ಇಂಡಿಯನ್ ಇಮ್ಯುನೊಲಾಜಿಕಲ್ಸ್, ಮೈನ್ವಾಕ್ಸ್ ಹಾಗೂ ಬಯೋಲಾಜಿಕಲ್ ಇ ಮೊದಲಾದ ಭಾರತೀಯ ಫಾರ್ಮಾ ಸಂಸ್ಥೆಗಳು ಕೂಡಾ ಸೇರಿದೆ.
ಈಗಾಗಲೇ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಕ್ಯಾಂಡಿಡೇಟ್ ಕೋವಾಕ್ಸಿನ್ಗೆ ಲಸಿಕೆಯ ಮೊದಲ ಹಾಗೂ 2 ನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಅವಕಾಶ ನೀಡಲಾಗಿದ್ದು ಕಳೆದ ವಾರದಿಂದ ಮಾನವ ಪ್ರಯೋಗವನ್ನು ಆರಂಭ ಮಾಡಿದೆ. ಅಸ್ಟ್ರಾಜೆನೆಕಾ ಆಕ್ಸ್ಫರ್ಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುತ್ತಿದ್ದು ಅಸ್ಟ್ರಾಜೆನೆಕಾ ಆಕ್ಸ್ಫರ್ಡ್ ಲಸಿಕೆಯ ಆಗಸ್ಟ್ನಲ್ಲಿ ಭಾರತದಲ್ಲಿ ಲಸಿಕೆಯ ಮಾನವ ಪ್ರಯೋಗ ನಡೆಯಲಿದೆ ಎಂದು ತಿಳಿಸಿದೆ. ಹಾಗೆಯೇ ಝೈಡಸ್ ಕ್ಯಾಡಿಲಾ ಸಂಸ್ಥೆ ಕ್ಯಾಂಡಿಡೇಟ್ ಝೈಕೋವಿ-ಡಿ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು 7 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದೆ.