ನವದೆಹಲಿ, ಜು 20 (Daijiworld News/MSP): ಕೊರೊನಾದಿಂದ ಬಳಲುತ್ತಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸಂಪೂರ್ಣ ಗುಣಹೊಂದಿ ಮತ್ತೆ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದ್ದು, "ಆರೋಗ್ಯದಲ್ಲಿ ಚೇತರಿಸಿಕೊಂಡ ನಂತರ ಕರ್ತವ್ಯಕ್ಕೆ ಹಾಜರಾಗುತ್ತಿರುವ ಸಚಿವರಿಗೆ ಮತ್ತೆ ಸ್ವಾಗತ" ಎಂದು ಶುಭ ಕೋರಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿದ್ದ ಸಮಯದಲ್ಲಿ ನಿರಂತರ ಕೆಲಸದಲ್ಲಿ ತೊಡಗಿದ್ದ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದರು. ಆರೋಗ್ಯಾಧಿಕಾರಿಗಳು ಮತ್ತು ವೈದ್ಯರ ಜೊತೆಗೆ ಕಾಲಕಾಲಕ್ಕೆ ಸಭೆಗಳನ್ನು ನಡೆಸುತ್ತಿದ್ದರು. ಈ ವೇಳೆ ಆರೋಗ್ಯ ಸಚಿವರಿಗೆ ಕೊರೊನಾ ಸೋಂಕು ತಗಲಿತ್ತು.
ಜೂನ್ 15 ರಂದು ಈಶಾನ್ಯ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಜೈನ್ ಅವರಿಗೆ ಜೂನ್ 17 ರಂದು ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮಾತ್ರವಲ್ಲದೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆ ಬಳಿಕ ಅವರನ್ನು ಸಾಕೇತ್ ನಲ್ಲಿನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಫ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗಿತ್ತು. ಪಾಸ್ಮಾ ಥೆರಪಿ ಚಿಕಿತ್ಸೆಗೆ ಒಳಪಡಿಸಿದ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ್ ಕಂಡುಬಂದಿತ್ತು.