ಲಕ್ನೋ, ಜು. 20 (DaijiworldNews/MB) : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಶಿಲಾನ್ಯಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬೆಳ್ಳಿಯ ಇಟ್ಟಿಗೆಯನ್ನು ಇರಿಸಲಿದ್ದಾರೆ.
ಆಗಸ್ಟ್ 5 ರಂದು ನಡೆಯಲಿರುವ ಭೂಮಿ ಪೂಜೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ , ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೂ ಆಹ್ವಾನ ನೀಡಲಾಗಿದ್ದು ಈ ಸಂದರ್ಭದಲ್ಲಿ ಐದು ಬೆಳ್ಳಿ ಇಟ್ಟಿಗೆಗಳನ್ನು ಇರಿಸಲಾಗುತ್ತದೆ. ಮೊದಲ ಬೆಳ್ಳಿ ಇಟ್ಟಿಗೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇರಿಸಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಉದ್ಘಾಟನ ಕಾರ್ಯಕ್ರಮವನ್ನು ಮತ್ತು ವಿವಿಧ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ಡೌನ್ ಬಳಿಕ ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ದೈಹಿಕವಾಗಿ ಉಪಸ್ಥಿತರಿರಲಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನೀಡಿದ ವಿನ್ಯಾಸದ ಪ್ರಕಾರ ಮಂದಿರ ನಿರ್ಮಿಸಲಾಗುತ್ತಿದ್ದು ಇದರ ವಿಸ್ತೀರ್ಣ ಸುಮಾರು 76 ರಿಂದ 84 ಸಾವಿರ ಚದರ ಗಜಗಳಾಗಿರಲಿದೆ.
ಕಳೆದ ಮಾರ್ಚ್ನಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ್ದು ರಾಮ ಮಂದಿರ ನಿರ್ಮಾಣಕ್ಕಾಗಿ 1 ಕೋಟಿ ರೂ. ಗಳ ದೇಣಿಗೆಯನ್ನೂ ಘೋಷಿಸಿದ್ದರು.