ಬೆಂಗಳೂರು, ಜು. 21 (DaijiworldNews/MB) : ಕೊರೊನಾ ಸೋಂಕಿತರು ಬಳಸಿದ ಹಾಸಿಗೆಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಸರ್ಕಾರ ತೀರ್ಮಾನಿಸಿದ್ದು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ''ಸೋಂಕಿನಿಂದ ಸಾವನ್ನಪ್ಪಿದವರ ದೇಹವನ್ನು ಮುಟ್ಟಲು ಹಿಂದೆ ಮುಂದೆ ನೋಡುವ ಈ ಸರ್ಕಾರ ಅವರು ಬಳಸಿದ ಹಾಸಿಗೆಯನ್ನು ವಿದ್ಯಾರ್ಥಿಗಳಿಗೆ ನೀಡುವುದು ಎಷ್ಟು ಸರಿ?'' ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ಕೋವಿಡ್-19 ಚಿಕಿತ್ಸಾ ಸಲಕರಣೆ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿ ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಮುಖಂಡರು, ಕಾಂಗ್ರೆಸ್ ಕೋವಿಡ್ ಕಾರ್ಯಪಡೆ ಹಾಗೂ ವೈದ್ಯ ಘಟಕದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
''ಸರ್ಕಾರ 10 ಸಾವಿರವೋ 20 ಸಾವಿರವೋ ಹಾಸಿಗೆಗಳ ಖರೀದಿಗೆ ಮುಂದಾಗಿದೆ. ಮೊದಲು ಒಂದಕ್ಕೆ ಮೂರರಷ್ಟು ದರ ನಿಗದಿ ಮಾಡಿ ಬಾಡಿಗೆ ಎಂದು ಹೇಳಿದ್ದರು. ಈಗ ಖರೀದಿ ಮಾಡಿದ್ದಾರೆ. ಇನ್ನು ಕೊರೊನಾ ಸೋಂಕಿತರು ಬಳಸಿದ ಈ ಹಾಸಿಗೆಗಳನ್ನು ವಿದ್ಯಾಥಿಗಳಿಗೆ ನೀಡುವುದಾಗಿ ಹೇಳುತ್ತಾರೆ. ಅಧಿಕಾರಿಗಳು ಸಲಹೆ ನೀಡಿದರು. ಸರ್ಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ'' ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
''ದೇಶದಲ್ಲಿ ವಿದ್ಯಾವಂತಿಕೆ, ಬುದ್ಧಿವಂತಿಕೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಕೊಂಚ ಪ್ರಜ್ಞಾವಂತಿಕೆ ಇರಬೇಕು. ವಿದ್ಯಾರ್ಥಿಗಳಿಗೆ ಸೋಂಕಿತರು ಬಳಸಿದ ಹಾಸಿಗೆ ನೀಡುವುದು ಎಷ್ಟು ಸರಿ? ನಮ್ಮ ಹಳ್ಳಿ ಮಕ್ಕಳಿಗೆ ಹೇಗೆ ನೀಡುತ್ತಾರೆ? ಇವರಿಗೆ ಬುದ್ಧ ಇದೆಯಾ? ಎಂದು ಪ್ರಶ್ನಿಸಿದ ಅವರು ಸರ್ಕಾರದ ಆಡಳಿತ ಕ್ರಮಕ್ಕೆ ಇದೇ ಸಾಕ್ಷಿ. ಏನೇನೋ ಸಲಹೆ ನೀಡುವ ಅಧಿಕಾರಿಗಳನ್ನು ಇಟ್ಟುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಸೋಂಕಿತರು ಬಳಸಿದ ಹಾಸಿಗೆ ನೀಡಲು ನಾವು ಅವಕಾಶ ನೀಡುವುದಿಲ್ಲ'' ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.