ಚೆನ್ನೈ, ಜು 21 (Daijiworld News/MSP): ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯಾಕಾಂಡದ ಪ್ರಮುಖ ಅಪರಾಧಿ ನಳಿನಿ ಶ್ರೀಹರನ್ ವೆಲ್ಲೂರು ಸೋಮವಾರ ರಾತ್ರಿ ಕಾರಾಗೃಹದಲ್ಲಿಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಶಿಕ್ಷೆ ಪಡೆದಿದ್ದ ನಳಿನಿ ಶ್ರೀಹರನ್ ಕಳೆದ 29 ವರ್ಷಗಳಿಂದ ಇದೇ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.
ನಳಿನಿ ಪರ ವಕೀಲೆ ಪುಗಳೇಂದಿ ಅವರ ಪ್ರಕಾರ " ನಳಿನಿ ಮತ್ತು ಕಾರಾಗೃಹದಲ್ಲಿದ್ದ ಇನ್ನೊಬ್ಬ ಅಪರಾಧಿಯ ನಡುವೆ ಜಗಳವಾಗಿದೆ. ಈ ವಿಷಯವನ್ನು ಇತರ ಕೈದಿಗಳು ಜೈಲರ್ ಗೆ ತಿಳಿಸಿದಾಗ ನಳಿನಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ" ಎಂದು ಹೇಳಿದ್ದಾರೆ.
ಮಾತ್ರವಲ್ಲದೆ , ಕಳೆದ 29 ವರ್ಷಗಳಲ್ಲಿ ನಳಿನಿ ಆತ್ಮಹತ್ಯೆಗೆ ಯತ್ನಿಸಿರುವುದು ಇದೇ ಮೊದಲ ಬಾರಿ. ಹೀಗಾಗಿ, ಈ ನಿರ್ಧಾರದ ಹಿಂದಿನ ಸ್ಪಷ್ಟ ಕಾರಣವೇನು ಎಂದು ತಿಳಿಯಬೇಕಿದೆ ಎಂದು ಪುಗಳೇಂದಿ ಹೇಳಿದ್ದಾರೆ.
ಇದಲ್ಲದೆ, ನಳಿನಿಯ ಪತಿ ಮುರುಗನ್ ಸಹ ಇದೇ ಕಾರಾಗೃಹದಲ್ಲಿದ್ದು, ಜೈಲಿನಿಂದ ವಕೀಲರಿಗೆ ಕರೆ ಮಾಡಿ ನಳಿನಿಯನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆದಷ್ಟು ಬೇಗ ಕಾನೂನಿನ ಮೊರೆ ಹೋಗುವುದಾಗಿ ವಕೀಲರು ತಿಳಿಸಿದ್ದಾರೆ.