ನವದೆಹಲಿ, ಜು 21 (Daijiworld News/MSP): ತನ್ನಿಬ್ಬರು ಮಕ್ಕಳೊಂದಿಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತನೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಆತನ ತಲೆಗೆ ಗುಂಡು ಹಾರಿಸಿರುವ ಘಟನೆ ದೆಹಲಿ ಬಳಿಯ ಗಾಜಿಯಾಬಾದ್ನಲ್ಲಿ ಸೋಮವಾರ ರಾತ್ರಿ ನಡೆದಿದೆ. ಈ ಎಲ್ಲಾ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪತ್ರಕರ್ತ ವಿಕ್ರಮ್ ಜೋಶಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೈಕಿನಲ್ಲಿ ಗಾಜಿಯಾಬಾದ್ ನ ವಿಜಯನಗರದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗುಂಪೊಂದು ಅವರನ್ನು ತಡೆದು ಮೇಲೆ ಹಲ್ಲೆ ನಡೆಸಿ ನೇರವಾಗಿ ತಲೆಗೆ ಗುಂಡಿಕ್ಕಿದ್ದಾರೆ.
ಪತ್ರಕರ್ತ ವಿಕ್ರಮ್ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗುಂಡು ಹಾರಿಸಿದ ಮುಖ್ಯ ಆರೋಪಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಜೋಶಿ ಅವರ ಕುಟುಂಬಕ್ಕೆ ಪರಿಚಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ
ಸೋಮವಾರ ರಾತ್ರಿ 10: 30 ರ ಸುಮಾರಿಗೆ ಈ ದಾಳಿ ನಡೆದಿದ್ದು, ಗುಂಪು ತಡೆದು ಬೈಕ್ ಬಿದ್ದ ತಕ್ಷಣ ಮಕ್ಕಳು ಅಲ್ಲಿಂದ ಓಡಿ ಹೋಗಿದ್ದಾರೆ. ಆದರೆ ಗುಂಡು ಹಾರಿಸಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿಲ್ಲ. ದಾಳಿಕೋರರು ಜೋಶಿಯವರನ್ನು ಕಾರಿನ ಕಡೆಗೆ ಎಳೆದುಕೊಂಡು ಹೋಗುತ್ತಿರುವುದು ಹಾಗೂ ಸ್ಥಳದಿಂದ ಓಡಿಹೋಗುವ ಮೊದಲು ಅವರ ಹಲ್ಲೆ ನಡೆಸುತ್ತಿರುವ ದೃಶ್ಯ ದಾಖಲಾಗಿದೆ.
ದಾಳಿಯ ಪರಿಣಾಮ ಜೋಶಿ ರಸ್ತೆಯಲ್ಲಿ ಬಿದ್ದಿರುವುದು ಮತ್ತು ಅವರ ಭಯಭೀತ ಮಕ್ಕಳು ಅವರ ಪಕ್ಕ ಕುಳಿತು ಅಳುವುದು, ಸಹಾಯಕ್ಕಾಗಿ ಕಿರುಚುವುದು ವಾಹನಗಳ ಬಳಿ, ಜನರ ಬಳಿ ಸಹಾಯಕ್ಕಾಗಿ ಅಂಗಲಾಚುವುದು ದೃಶ್ಯಾವಳಿಯಲ್ಲಿ ಗೋಚರಿಸುತ್ತಿದೆ.
" ವಿಜಯ್ ನಗರದಲ್ಲಿ ಪತ್ರಕರ್ತನೊಬ್ಬನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ವಿಕ್ರಮ್ ಜೋಶಿ ಅವರ ಸೋದರ ಸೊಸೆ, ಈ ಗುಂಪಿನ ವಿರುದ್ಧ ದೂರು ನೀಡಿದ್ದಳು ಎಂದು ತಿಳಿದುಬಂದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.