ಮೈಸೂರು, ಜು. 21 (DaijiworldNews/MB) : ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಾರಾಪುರ ಬಳಿಯ ಗ್ರಾಮದಲ್ಲಿ ಚಿರತೆಯ ರಕ್ಷಣೆ ಮಾಡಲೆಂದು 100 ಅಡಿ ಆಳದ ಒಣ ಬಾವಿಗೆ ಅರಣ್ಯಾಧಿಕಾರಿ ಇಳಿಯುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿರತೆಯ ರಕ್ಷಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿದ್ದು ಸೋಮವಾರ ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ಸಂಜೆ ಗ್ರಾಮದಲ್ಲಿರುವ ಬಾವಿಯೊಳಗೆ ಚಿರತೆಯೊಂದು ಬಿದ್ದಿದೆ ಎಂದು ಗ್ರಾಮಸ್ಥರು ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಈ ಮಾಹಿತಿಯ ಆಧಾರದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಗೆ ಹುಡುಕಾಟ ನಡೆಸಿದ್ದಾರೆ.
ಚಿರತೆ ಎಲ್ಲಿಯೂ ಪತ್ತೆಯಾಗದ ಹಿನ್ನಲೆ ಬಾವಿಯಲ್ಲಿ ಪತ್ತೆಯಾಗದ ಹಿನ್ನಲೆ ಸುಮಾರು ನೂರಡಿ ಆಳವಿರುವ ಬಾವಿಗೆ ಟಾರ್ಚ್ ಲೈಟ್ ಬಿಟ್ಟು ಶೋಧ ನಡೆಸಿದ್ದು ಅಲ್ಲಿಯೂ ಚಿರತೆ ಕಂಡು ಬಂದಿರಲಿಲ್ಲ. ಕೊನೆಗೆ ಅರಣ್ಯಾಧಿಕಾರಿ ಸಿದ್ದರಾಜು ಎಂಬುವವರು ಬೋನಿನೊಳಗೆ ಕೂತು, ಅವರ ಸಮೇತ ಬೋನನ್ನು ಬಾವಿಗೆ ಇಳಿಸಿ ಚಿರತೆಯನ್ನು ಬಾವಿಯೊಳಗೆ ಹುಡುಕಾಡಲಾಗಿದೆ.
ಆದರೆ ಬಾವಿಯಲ್ಲಿ ಚಿರತೆ ಪತ್ತೆಯಾಗಿರಲಿಲ್ಲ. ಬಾವಿಯಲ್ಲಿರುವ ಗುಹೆಯೊಂದರಲ್ಲಿ ಚಿರತೆ ಇರುವ ಸಾಧ್ಯತೆಯಿಂದ ವಿಡಿಯೋ ಕ್ಯಾಮೆರಾದ ಮೂಲಕ ಶೋಧ ನಡೆಸಿದಾಗ ಬಾವಿಯೊಳಗಿನ ಗುಹೆಯಲ್ಲಿ ಚಿರತೆ ಪತ್ತೆಯಾಗಿದ್ದು ಚಿರತೆಯನ್ನು ಪತ್ತೆ ಹಚ್ಚುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಏತನ್ಮಧ್ಯೆ ರಕ್ಷಣಾ ಕಾರ್ಯಾಚರಣೆಯ ಫೋಟೋ ವಿಡಿಯೋಗಳು ವೈರಲ್ ಆಗಿದ್ದು ಚಿರತೆಯ ರಕ್ಷಣೆಗಾಗಿ ನೂರು ಅಡಿ ಆಳದ ಬಾವಿಗೆ ಇಳಿದ ಅರಣ್ಯಾಧಿಕಾರಿ ಸಿದ್ದರಾಜು ಅವರು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪರ್ವೀನ್ ಕಸ್ವಾನ್ ಐಎಫ್ಎಸ್ ಎನ್ನುವವರು ಸಿದ್ದರಾಜು ಅವರು ಬೋನಿನೊಳಗೆ ಕೂತು ಬಾವಿಯ ಒಳಗೆ ಇಳಿಯುವ ಫೋಟೋವೊಂದನ್ನು ಹಾಕಿ, ಇವರು ಸಿದ್ದರಾಜು, ನಾಗರಹೊಳೆಯಲ್ಲಿ ಆರ್ಎಫ್ಒ. ಚಿರತೆಯನ್ನು ರಕ್ಷಿಸಲು 100 ಅಡಿ ಒಣ ಬಾವಿಗೆ ಇಳಿದರು. ಟಾರ್ಚ್ ಮತ್ತು ಕೈಯಲ್ಲಿರುವ ಮೊಬೈಲ್ ಫೋನ್ನೊಂದಿಗೆ ಬೀಗ ಹಾಕಿರುವ ಬೋನಿನೊಳಗೆ ಕೂತ ಇವರು ಚಿರತೆಯ ರಕ್ಷಣೆಗಾಗಿ ಮುಂದಾಗಿದ್ದಾರೆ. ಇದು ನಿಜವಾದ ಬದ್ಧತೆ. ಇಂತಹ ಹಸಿರು ಸೈನಿಕರ ಮೇಲೆ ಹೆಮ್ಮೆಯಿದೆ ಎಂದು ಬರೆದಿದ್ದಾರೆ.