ನವದೆಹಲಿ, ಜು 21 (DaijiworldNews/PY): ಕಾಂಗ್ರೆಸ್ ಪಕ್ಷವು ಜನಪರವಾಗಿ ಯಾವುದೇ ಕೆಲಸ ಮಾಡದ ಕಾರಣ ಹಾಗೂ ಒಬ್ಬ ನಾಯಕರ ಬಳಿಕ ಮತ್ತೊಬ್ಬರನ್ನು ಕಳೆದುಕೊಳ್ಳುತ್ತಿರುವುದರಿಂದ ಟ್ವೀಟ್ ಪಕ್ಷವಾಗಿ ಉಳಿಯಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, ಫೆಬ್ರವರಿಯಲ್ಲಿ ಶಾಹಿನ್ ಬಾಗ್ನಲ್ಲಿ ಸಿಎಎ ವಿರೋಧಿ ಪ್ರಭಟನೆಗಳು ಹಾಗೂ ದೆಹಲಿಯ ಗಲಭೆಗಳು, ಮಾರ್ಚ್ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಸಂಸದರ ಪಕ್ಷತ್ಯಾಗ, ಎಪ್ರಿಲ್ನಲ್ಲಿ ವಲಸೆ ಕಾರ್ಮಿಕರನ್ನು ಪ್ರಚೋದಿಸಿದ್ದು, ಮೇ ತಿಂಗಳಿನಲ್ಲಿ ಕಾಂಗ್ರೆಸ್ನ ಐತಿಹಾಸಿಕ ಸೋಲಿನ 6 ನೇ ವಾರ್ಷಿಕೋತ್ಸವ, ಜೂನ್ನಲ್ಲಿ ಗಡಿ ಸಂಘರ್ಷಣೆಯ ಸಂದರ್ಭ ಚೀನಾ ಪರ ಪ್ರತಿಪಾದನೆ, ಜುಲೈ ತಿಂಗಳಿನಲ್ಲಿ ರಾಜಸ್ಥಾನದಲ್ಲೂ ಪಕ್ಷ ಅಂತ್ಯ ಕಂಡಿದ್ದು ಇದು ಕಾಂಗ್ರೆಸ್ ಪಕ್ಷದ ಇತ್ತೀಚಿಗಿನ ಸಾಧನೆಗಳು ಎಂದು ವ್ಯಂಗ್ಯ ಮಾಡಿದ್ದಾರೆ.
ರಾಹುಲ್ ಅವರೇ, ಕೊರೊನಾ ವಿರುದ್ದದ ಹೋರಾಟದಲ್ಲಿ ಭಾರತದ ಸಾಧನೆಗಳನ್ನು ಗಮನಿಸಿ. ಭಾರತವು, ಅಮೆರಿಕ, ಯುರೋಪ್ ಹಾಗೂ ಬ್ರೆಜಿಲ್ಗಿಂತ ಕಡಿಮೆ ಕೊರೊನಾ ಪ್ರಕರಣಗಳನ್ನು ಹಾಗೂ ಸಾವಿನ ಪ್ರಮಾಣವನ್ನು ಹೊಂದಿದೆ. ದೀಪ ಬೆಳಗಿದ್ದರ ಬಗ್ಗೆ ಗೇಲಿ ಮಾಡಿರುವ ನೀವು ಭಾರತದ ಜನರನ್ನು ಹಾಗೂ ಕೆಚ್ಚೆದೆಯ ಕೊರೊನಾ ಯೋಧರನ್ನು ಅವಮಾನಿಸಿದ್ದೀರಿ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಮಾಡಿದ್ದ ಟ್ವೀಟ್ನಲ್ಲಿ, ಫೆಬ್ರವರಿಯಲ್ಲಿ ಹಲೋ ಟ್ರಂಪ್, ಮಾರ್ಚ್ನಲ್ಲಿ ಮಧ್ಯಪ್ರದೇಶ ಸರ್ಕಾರದ ಪದಚ್ಯುತಿ, ಎಪ್ರಿಲ್ನಲ್ಲಿ ಮೊಂಬತ್ತಿ ಬೆಳಗಿಸಲು ಜನರಿಗೆ ಕರೆ ನೀಡಿದ್ದು, ಮೇ ತಿಂಗಳಿನಲ್ಲಿ ಸರ್ಕಾರದ ಆರನೇ ವಾರ್ಷಿಕೋತ್ಸವ, ಜೂನ್ನಲ್ಲಿ ಬಿಹಾರದ ವರ್ಚುವಲ್ ರ್ಯಾಲಿ, ಜುಲೈಯಲ್ಲಿ ರಾಜಸ್ಥಾನ ಸರ್ಕಾರ ಉರುಳಿಸಲು ಪ್ರಯತ್ನ. ಈ ಎಲ್ಲಾ ಕಾರಣಗಳಿಂದಾಗಿ ಕೊರೊನಾ ವಿರುದ್ದದ ಹೋರಾಟದಲ್ಲಿ ದೇಶ ಆತ್ಮ ನಿರ್ಭರ್ ಆಗಿದೆ ಎಂದು ವ್ಯಂಗ್ಯವಾಡಿದ್ದರು.