ಬೆಂಗಳೂರು, ಜು 21 (Daijiworld News/MSP): ಕೊರೊನಾ ವಿರುದ್ದ ಹೋರಾಡಲು ಲಾಕ್ ಡೌನ್ ಪರಿಹಾರವಲ್ಲ, ಹೀಗಾಗಿ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಇನ್ಮುಂದೆ ಲಾಕ್ ಡೌನ್ ಇಲ್ಲ ಎಂದು ರಾಜ್ಯವನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದ ಮೂಲಕ ಮಾಡಿದ ಭಾಷಣದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಆರ್ಥಿಕ ಪುನಶ್ಚೇತನ ಅಗತ್ಯವಾಗಿದೆ . ಹೀಗಾಗಿ ಲಾಕ್ ಡೌನ್ ಕೊರೊನಾ ತಡೆಗೆ ಪರಿಹಾರವಲ್ಲ. ಇದರ ಬದಲು ಕೊರೊನಾ ಸಾಂಕ್ರಮಿಕ ಕಾಯಿಲೆ ನಿಯಂತ್ರಣಕ್ಕೆ ತಜ್ಞರು ಕೊಟ್ಟಿರುವ 5ಟಿ ತಂತ್ರಗಳು ಬಹಳ ಮುಖ್ಯವಾಗಿವೆ. ಅವುಗಳೆಂದರೆ ಟ್ರೇಸ್ , ಟ್ರ್ಯಾಕ್ , ಟೆಸ್ಟ್ , ಟ್ರೀಟ್ ಹಾಗೂ ಟೆಕ್ನಾಲಜಿ ತಂತ್ರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ರಾಜ್ಯ ಈಗಾಗಲೇ ಮುಂಚೂಣಿಯಲ್ಲಿದೆ. ಇದರಿಂದ ಕೋವಿಡ್ ತಡೆಯಲು ಸಾಧ್ಯ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರತಿಪಕ್ಷಗಳು ಮಾಡಿರುವ ಆರೋಪಕ್ಕೆ ಉತ್ತರಿಸಿರುವ ಅವರು " ಕೊವೀಡ್ ಕೇರ್ ಸೆಂಟರ್ ನಲ್ಲಿ ಬಳಸಲಾಗಿರುವ ಬೆಡ್ ಗಳನ್ನು ಮರುಬಳಕೆ ಮಾಡಲಾಗುವುದಿಲ್ಲ. ಕೇವಲ ಮಂಚಗಳನ್ನು ಮಾತ್ರ ಸ್ಯಾನಿಟೈಸ್ ಮಾಡಿದ ಬಳಿಕ ಬಳಕೆ ಮಾಡಲಾಗುತ್ತದೆ. ಮಾತ್ರವಲ್ಲದೆ ಕೊವೀಡ್ ಸಂಬಂಧಿಸಿದ ಸಾಮಾಗ್ರಿ ಖರೀದಿಯಲ್ಲಿ 1 ರೂ. ಕೂಡಾ ದುರುಪಯೋಗವಾಗಿಲ್ಲ. ಅನಗತ್ಯ ಆರೋಪ ಬೇಡ. ಪ್ರತಿಪಕ್ಷ ಕೇಳಿದ ಯಾವುದೇ ಮಾಹಿತಿ ನೀಡಲು ರಾಜ್ಯ ಸರ್ಕಾರ ಸಿದ್ದವಾಗಿದೆ " ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯೂ ಶೇ.50 ರಷ್ಟು ಕೊರೊನಾ ಚಿಕಿತ್ಸೆಗಾಗಿ ನೀಡಲು ಹಾಸಿಗೆ ಮೀಸಲಿರಿಸದಿದ್ದಾರೆ. ಇದಲ್ಲದೆ ಕೊವೀಡ್ ಕೇರ್ ಸೆಂಟರ್ ಗೆ ಬೇಕಾದ ಎಲ್ಲಾಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಸದಾ ಸಿದ್ದ ಎಂದು ಇದೇ ವೇಳೆ ಹೇಳಿದ್ದಾರೆ.
ಸಚಿವರು, ಶಾಸಕರು, ವೈದ್ಯರು, ನರ್ಸ್ಗಳು, ಪೊಲೀಸರು ಹಾಗೂ ಆಶಾ ಕಾರ್ಯಕರ್ತರು ಕೋವಿಡ್ ತಡೆಯಲು ತಮ್ಮ ಜೀವವನ್ನೇ ಪಣವಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಆಡಳಿತವರ್ಗವೂ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮಾಸ್ಕ್ ಧರಿಸದೇ ಓಡಾಡುವರ ವಿರುದ್ದ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.