ಬೆಂಗಳೂರು, ಜು 21 (DaijiworldNews/PY): ದೇವರು ಧರ್ಮದ ಹೆಸರಲ್ಲಿ ಮುಗ್ಧರ ಶೋಷಣೆ, ಮೂಢನಂಬಿಕೆಯ ಆಚರಣೆ ಮಾಡುವುದು ತಪ್ಪು. ದೇವರನ್ನು ಗೇಲಿ - ಅವಹೇಳನ ಮಾಡುವುದು ವಿಕೃತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಹಿಂದೂ ದೇವರುಗಳ ಬಗ್ಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾದ ವಿಚಾರ ಮಾಧ್ಯಮಗಳ ಮೂಲಕ ಗಮನಕ್ಕೆ ಬಂತು. ಇದು ನಿಜವಾಗಿದ್ದರೆ, ಬಹಳ ಕೆಟ್ಟ ನಡೆ-ನುಡಿ ಎಂದು ಹೇಳಬೇಕಾಗುತ್ತದೆ. ದೇವರು ಮತ್ತು ಧರ್ಮ ಅವರವರ ನಂಬಿಕೆ, ಅದನ್ನು ನಾವು ಗೌರವಿಸಬೇಕು ಅವಹೇಳನ ಮಾಡಬಾರದು ಎಂದಿದ್ದಾರೆ.
ದೇವರು ಧರ್ಮದ ಹೆಸರಲ್ಲಿ ಮುಗ್ಧರ ಶೋಷಣೆ, ಮೂಢನಂಬಿಕೆಯ ಆಚರಣೆ ಮಾಡುವುದು ತಪ್ಪು. ರಾಜಕೀಯ ಇಲ್ಲವೇ ಇನ್ನಾವುದೋ ಸ್ವಾರ್ಥಸಾಧನೆಗಾಗಿ ದೇವರು- ಧರ್ಮವನ್ನು ದುರ್ಬಳಕೆ ಮಾಡುವುದು ಕೂಡಾ ತಪ್ಪು. ಆದರೆ, ದೇವರನ್ನು ಗೇಲಿ-ಅವಹೇಳನ ಮಾಡುವುದು ವಿಕೃತಿ. ಇದನ್ನು ಯಾರು ಮಾಡಿದರೂ ಖಂಡನೀಯ ಎಂದು ಆರೋಪಿಸಿದ್ದಾರೆ.