ಅಮರಾವತಿ, ಜು. 22 (DaijiworldNews/MB) : ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ನಡುವೆಯೂ ಆಂಧ್ರಪ್ರದೇಶದಲ್ಲಿ ಸೆಪ್ಟೆಂಬರ್ 5ರಿಂದ ಶಾಲೆಗಳು ಆರಂಭ ಮಾಡಲು ನಿರ್ಧರಿಸಲಾಗಿದೆ.
ಕೊರೊನಾದ ನಡುವೆ ಶಿಕ್ಷಣದ ಪರಿಸ್ಥಿತಿ ಕುರಿತಾಗಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಶಿಕ್ಷಣ ಸಚಿವ ಆದಿಮುಲಪು ಸುರೇಶ್ ನೇತೃತ್ವದಲ್ಲಿ ಸಭೆ ನಡೆಸಿದ ಬಳಿಕ ಸೆಪ್ಟೆಂಬರ್ 5ರಿಂದ ಶಾಲೆಗಳನ್ನು ಪುನರ್ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಸುರೇಶ್ ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಶಾಲೆ ಆರಂಭವಾಗುವವರೆಗೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಬದಲಾಗಿ ಅವರ ಮನೆಗಳಿಗೆ ದವಸ, ಧಾನ್ಯ ತಲುಪಿಸಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಮೇ ತಿಂಗಳಲ್ಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಆಗಸ್ಟ್ ೩ ರಿಂದ ಶಾಲೆಗಳು ಪುನರ್ ಆರಂಭ ಮಾಡಲಾಗುವುದು ಎಂದು ತಿಳಿಸಿದ್ದರು.
ಆಂದ್ರಪ್ರದೇಶದಲ್ಲಿ 53,724 ಕೊರೊನಾ ಪ್ರಕರಣಗಳು ದಾಖಲಾಗಿದ್ದು 24,228 ಮಂದಿ ಗುಣಮುಖರಾದರೆ 28,800 ಸಕ್ರಿಯ ಪ್ರಕರಣಗಳಾಗಿವೆ. 696 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.