ನವದೆಹಲಿ, ಜು 22 (Daijiworld News/MSP): ದೆಹಲಿ ಸಮೀಪದ ಗಾಜಿಯಾಬಾದ್'ನ ವಿಜಯನಗರದಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಒಳಗಾಗಿದ್ದ ಪತ್ರಕರ್ತ ವಿಕ್ರಮ್ ಜೋಷಿ ಚಿಕಿತ್ಸೆ ಫಲಿಸದೇ ಬುಧವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಪ್ರಕರಣದ ಸಂಬಂಧ ಈವರೆಗೂ ಒಂಬತ್ತು ಜನರನ್ನು ಬಂಧಿಸಲಾಗಿದೆ.
ತನ್ನಿಬ್ಬರು ಪುತ್ರಿಯರೊಂದಿಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೋಮವಾರ ರಾತ್ರಿ 10:30ರ ವೇಳೆಗೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿ ಆತನ ತಲೆಗೆ ಗುಂಡು ಹಾರಿಸಿತ್ತು. ಈ ಎಲ್ಲಾ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು .
ಸ್ಥಳೀಯ ದಿನಪತ್ರಿಕೆವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಕ್ರಮ್ ಜೋಶಿ, ಅವರ ಸೋದರ ಸೊಸೆಗೆ ಕಿರುಕುಳ ನೀಡುತ್ತಿದ್ದ ಕೆಲವರ ವಿರುದ್ಧ ಘಟನೆ ನಡೆದ ನಾಲ್ಕು ದಿನಗಳ ಹಿಂದೆ, ಅಂದರೆ ಜ. 16ರಂದು ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದಾದ ಬಳಿಕ ಜುಲೈ 17ರಂದು ಕ್ರಮಕ್ಕೆ ಆಗ್ರಹಿಸಿ ಕುಟುಂಬದವರು ಎಸ್ಎಸ್ಪಿ ಕಚೇರಿಗೆ ಅಂಚೆ ಮೂಲಕ ಪತ್ರ ರವಾನಿಸಿದ್ದರು. ಆದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.
ಈ ಹಿನ್ನಲೆಯಲ್ಲಿ ವಿಜಯ ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಹಾಗೂ ಘಾಜಿಯಾಬಾದ್ ಎಸ್ಎಸ್ಪಿ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.