ಬೆಂಗಳೂರು, ಜು. 22 (DaijiworldNews/MB) : ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಕೋವಿಡ್ ಇಂಡಿಯಾ ಕ್ಯಾಂಪೈನ್ ಮತ್ತು ಹೆಚ್ಸಿಜಿ ಆಸ್ಪತ್ರೆ ಜೊತೆಗೊಂಡು ರಾಜ್ಯದಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್ನ್ನು ರಾಜಧಾನಿ ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡುವವರಿಗೆ 5 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಈ ಹಿಂದೆಯೇ ಸರ್ಕಾರ ಘೋಷಿಸಿದೆ.
ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ ಹಾಗೂ ಸಂಸದ ತೇಜಸ್ವಿ ಸೂರ್ಯ ಹೆಚ್ಸಿಜಿ ಅವರು ಮಂಗಳವಾರ ಉದ್ಘಾಟನೆ ಮಾಡಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕಿತರಿಗೆ ನಡೆಸಿದ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾದ ಬಳಿಕ ದೇಶದಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್ನ್ನು ದೆಹಲಿಯಲ್ಲಿ ತೆರೆಯಲಾಗಿತ್ತು. ಬಳಿಕ ತಮಿಳುನಾಡು, ಪಶ್ಷಿಮ ಬಂಗಾಳ, ಒಡಿಶಾ ಮೊದಲಾದ ರಾಜ್ಯಗಳು ಪ್ಲಾಸ್ಮಾ ಬ್ಯಾಂಕ್ ತೆರೆದಿದೆ. ಕರ್ನಾಟಕದಲ್ಲಿ ಮಂಗಳವಾರ ಪ್ಲಾಸ್ಮಾ ಬ್ಯಾಂಕ್ ಆರಂಭವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಹೆಚ್ ಸಿಜಿ ಗ್ಲೋಬಲ್ ಆಸ್ಪತ್ರೆಯ ಮುಖ್ಯಸ್ಥ ಮತ್ತು ನಿರ್ದೇಶಕ ಡಾ ವಿಶಾಲ್ ರಾವ್, ನಾವು ಕೊರೊನಾ ವಿರುದ್ಧ ಹೋರಾಟ ನಡೆಸಬೇಕಾಗಿದ್ದು ಪ್ರಾಯೋಗಿಕವಾಗಿ ಪ್ಲಾಸ್ಮಾ ಥೆರಪಿಯು ಉತ್ತಮವಾದ ಫಲಿತಾಂಶವನ್ನು ನೀಡಿದೆ. ಕೊರೊನಾ ಸೋಂಕಿನಿಂದ ಗಂಭೀರ ಪರಿಸ್ಥಿತಿಯಲ್ಲಿದ್ದವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಹಾಗಾಗಿ ಸೋಂಕಿನಿಂದ ಗುಣಮುಖರಾದವರು ಅಧಿಕ ಸಂಖ್ಯೆಯಲ್ಲಿ ಪ್ಲಾಸ್ಮಾ ದಾನ ಮಾಡಬೇಕು ಎಂದು ವಿನಂತಿಸಿದರು.