ಬೆಂಗಳೂರು, ಜು 22 (Daijiworld News/MSP): ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೇರಲಾಗಿದ್ದ ಲಾಕ್ ಡೌನ್ ತೆರವುಗೊಳಿಸಲಾಗಿದೆ. ಮಾತ್ರವಲ್ಲದೆ , ಇನ್ಮುಂದೆ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಂಗಳವಾರ ಸ್ಪಷ್ಟಪಡಿಸಿದ್ದರು.
ಕೊರೊನಾ ನಿಯಂತ್ರಣಕ್ಕೆ ತಜ್ಞರು 5ಟಿ ತಂತ್ರ ವಾದ ಟೆಸ್ಟ್, ಟ್ರ್ಯಾಕ್, ಟ್ರೇಸ್, ಟ್ರೀಟ್ ಅಂಡ್ ಟೆಕ್ನಾಲಜಿ ಎಂಬುದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದು ಹೇಳಿದ್ದರು.
ರಾಜ್ಯದಲ್ಲಿ ಲಾಕ್ ಡೌನ್ ತೆರವಾದರೂ ಅನ್ ಲಾಕ್ 2.0 ಮಾರ್ಗಸೂಚಿಗಳ ಪ್ರಕಾರ ಸಂಡೇ ಲಾಕ್ ಡೌನ್ , ನೈಟ್ ಕರ್ಫ್ಯೂ ನಲ್ಲಿ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ. ರಾಜ್ಯಾದ್ಯಂತ ರಾತ್ರಿ 9.00 ಗಂಟೆಯಿಂದ ಬೆಳಗ್ಗೆ 5.00 ಗಂಟೆಯವರೆಗೆ ಕರ್ಫ್ಯೂ ಸ್ಥಿತಿ ಹಾಗೂ ಸದ್ಯ ಚಾಲ್ತಿಯಲ್ಲಿರುವ ಪ್ರತೀ ಭಾನುವಾರದ ಲಾಕ್ ಡೌನ್ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಇದಲ್ಲದೆ ಆಯಾ ಜಿಲ್ಲಾಡಳಿತಗಳ ಪ್ರತ್ಯೇಕ ಮಾರ್ಗಸೂಚಿಗಳು ಪ್ರಕಟಗೊಳ್ಳುವವರೆಗೂ ಅನ್ ಲಾಕ್ 2.0ರ ಮಾರ್ಗಸೂಚಿಯು ಈ ಮೇಲಿನ ಬದಲಾವಣೆಗಳೊಂದಿಗೆ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.