ಬೆಂಗಳೂರು, ಜು 22 (DaijiworldNews/PY): ಸಿಇಟಿ ಪರೀಕ್ಷೆಯ ಜು 30, 31ರಂದು ನಡೆಯಲಿದ್ದು, 497 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಟಿ ಪರೀಕ್ಷೆಯ ಎರಡು ದಿನಗಳ ಮೊದಲೇ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಸೇರಿದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಪರೀಕ್ಷೆಯು ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಡೆಯಲಿದ್ದು, ಎಸ್ಒಪಿ ತಂಡಗಳನ್ನು ಈಗಾಗಾಲೇ ರಚನೆ ಮಾಡಲಾಗಿದೆ. ಈ ನಡುವೆ, ಪರೀಕ್ಷೆಗೆಂದು ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿನಾಯಿತಿ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ 30,000ಕ್ಕೂ ಆಧಿಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 83 ಪರೀಕ್ಷಾ ಕೇಂದ್ರಗಳಿದ್ದು, 40,200 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್ ಸೇರಿದಂತೆ ಎಲ್ಲಾ ರೀತಿಯಾದ ತುರ್ತು ಅಗತ್ಯ ಸೇವೆಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದಿದ್ದಾರೆ.
ಸಿಇಟಿ ಪರೀಕ್ಷೆ ಬರೆಯಲು ಹೊರರಾಜ್ಯದಿಂದ 1891 ವಿದ್ಯಾರ್ಥಿಗಳು ಬರಲಿದ್ದು, ಗಡಿ ಜಿಲ್ಲೆಗಳಲ್ಲಿ ಅವರಿಗೆ ಪರೀಕ್ಷಾ ಕೇಂದ್ರಗಳ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಅಲ್ಲದೇ ಹೊರ ದೇಶದಿಂದಲೂ 30 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಗಮಿಸಿಲಿದ್ದು, ಆ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಹಿಂದೇ ನೋಟಿಸ್ ನೀಡಲಾಗಿತ್ತು ಎಂದು ಹೇಳಿದ್ಧಾರೆ.
ಆಗಸ್ಟ್ 8-9 ರಂದು ನಿಗದಿಯಾಗಿದ್ದ ಪಿಜಿಸಿಇಟಿ ಪರೀಕ್ಷೆ ಮುಂದೂಡಲಾಗಿದ್ದು, ಡಿಪ್ಲೊಮಾ ಸಿಇಟಿ ಹಾಗೂ ಪಿಜಿಸಿಇಟಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ಸಿಇಟಿ ಪರೀಕ್ಷೆ ತಡವಾದ ಕಾರಣ ಇಂಜಿನಿಯರಿಂಗ್ ಸೇರಿದಂತೆ ದಂತವೈದ್ಯ ಕೋರ್ಸ್ ಹಾಗೂ ಮೆಡಿಕಲ್ ಕೋರ್ಸ್ಗಳ ದಾಖಲಾತಿಯ ದಿನಾಂಕ ಕೂಡಾ ಮುಂದೂಡಲಾಗುತ್ತದೆ. ಸಿಇಟಿ ಪರೀಕ್ಷೆ ಮುಗಿದ ನಂತರ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕೋರ್ಸ್ಗಳಿಗೆ ದಾಖಲಾತಿಗೆ ಕಾಲಾವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.