ನವದೆಹಲಿ, ಜು 22 (DaijiworldNews/PY): ಐಐಎಂಗೆ ಸೇರಲು ವಿಫಲವಾದ ಹಿನ್ನೆಲೆ ಇಂಜಿನಿಯರ್ ಓರ್ವ ಅಪಹರಣದ ಕಥೆಕಟ್ಟಿ ಪೋಷಕರನ್ನು ದಾರಿತಪ್ಪಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
24 ವರ್ಷದ ವ್ಯಕ್ತಿ ದೆಹಲಿಯ ಇಂಜಿನಿಯರಿಂಗ್ ಸಂಸ್ಥೆಯ ಮೆಕ್ಯಾನಿಕ್ ಇಂಜಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದ್ದರು. ಅಲ್ಲದೇ ಅವರು ನೋಯ್ಡಾದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಕೊರೊನಾ ಲಾಕ್ಡೌನ್ ಕಾರಣದಿಂದ ಮೆಯಲ್ಲೇ ಕೆಲಸ ಮಾಡುತ್ತಿದ್ದರು. ಈತ ಐಐಎಂ ಅಹಮದಾಬಾದ್ನಲ್ಲಿ ಎಂಬಿಎ ಮಾಡಲು ಇಚ್ಚಿಸಿದ್ದು, ಅದು ಸಫಲವಾಗದ ಕಾರಣ ಅಸಮಾಧಾನಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರಣದಿಂದ ಆತ ಸಾಯಲು ನಿರ್ಧರಿಸಿದ್ದು, ತನ್ನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ಪೋಷಕರಿಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ರವಾನಿಸಿದ್ದಾನೆ. ಅಲ್ಲದೇ, ಅಪಹರಣ ಮಾಡಿದ್ದಾರೆ ಎಂದು ಹೇಳಿ ಪೋಷಕರ ದಾರಿ ತಪ್ಪಿಸಿದ್ದಾನೆ.
ತನ್ನ ಮಗನ ಅಪಹರಣದ ಬಗ್ಗೆ ಮೊಬೈಲ್ಗೆ ಸಂದೇಶವನ್ನು ನೋಡಿದ ತಂದೆ ಗಾಬರಿಯಿಂದ ಜು19ರಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರುನ ಆಧಾರದಂತೆ ಬುಧ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 19 ರಂದು ಸಂಜೆ 6 ಗಂಟೆ ಸುಮಾರಿಗೆ ತನ್ನ ಮಗ ಎಟಿಎಂಗೆ ಎಂದು ಹೋಗಿದ್ದ. ಆದರೆ, ಆತ ಮನೆಗೆ ವಾಪಾಸ್ಸಾಗಲಿಲ್ಲ. ಅವನಿಗೆ ಫೋನ್ ಕರೆ ಮಾಡಿದರೂ ಸಹ ತಲುಪುತ್ತಿರಲಿಲ್ಲ ಎಂದು ವ್ಯಕ್ತಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ವ್ಯಕ್ತಿಯ ತಂದೆಯ ಮೊಬೈಲ್ಗೆ ಆತನ ಮಗನ ಮೊಬೈಲ್ ಫೋನ್ನಿಂದ ಸಂದೇಶ ಬಂದಿದ್ದು, ನಿಮ್ಮ ಮಗನನ್ನು ಜೀವಂತವಾಗಿ ನೋಡಲು ಬಯಸಿದ್ದಲ್ಲಿ ನಾಳೆಯ ಒಳಗಾಗಿ 5 ಲಕ್ಷ ರೂ. ನೀಡಬೇಕು ಎಂದಿತ್ತು.
ಆ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ ಸಂದರ್ಭ, ಆತ ಮನೆಯಿಂದ ಹೊರಹೋಗಿದ್ದಾನೆ. ಆದರೆ, ಆತ ಎಟಿಎಂಗೆ ಹೋಗಿಲ್ಲ. ಬದಲಾಗಿ ಆತ ಅಲ್ಲಿಂದ ಬೇರೆ ಕಡೆ ಹೋಗಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ರೋಹಿಣಿ) ಪಿಕೆ ಮಿಶ್ರಾ ಹೇಳಿದ್ದಾರೆ.
ಆತ ಎಲ್ಲಿದ್ದಾನೆ ಎಂದು ಪತ್ತೆ ಹಚ್ಚುವ ಸಲುವಾಗಿ ಆತನ ಮೊಬೈಲ್ ಫೋನ್ನ ಸಿಡಿಆರ್ಗಳನ್ನು ಪಡೆಯಲಾಗಿತ್ತು. ಆದರೆ, ಆತನ ಬಳಿ ಇನ್ನೊಂದು ಮೊಬೈಲ್ ಪೋನ್ ಇರುವುದಾಗಿ ಪೊಲೀಸರಿಗೆ ತಿಳಿದುಬಂದಿದ್ದು, ಈ ಮೊಬೈಲ್ ಸಂಖ್ಯೆಯು ಆತನ ಪೋಷಕರಿಗೂ ಸಹ ತಿಳಿದಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ನಡುವೆ ಇನ್ನೊಂದು ಮೊಬೈಲ್ ಫೋನ್ ರಾತ್ರಿ 8.47 ಕ್ಕೆ ಸಾರೈ ರೋಹಿಲ್ಲಾ ರೈಲು ನಿಲ್ದಾಣದಲ್ಲಿ ಸಕ್ರಿಯವಾಗಿರುವುದು ಕಂಡುಬಂದಿದೆ. ಈ ಹಿನ್ನಲೆ ಪೊಲೀಸರು ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆತ ಜೈಪುರದಿಂದ ಹೊರಟ ಸಂಪರ್ಕ್ ಕ್ರಾಂತಿ ಎಕ್ಸ್ ಪ್ರೆಸ್ನ ರೈಲು ವಿಭಾಗಕ್ಕೆ ಬರುವುದು ತಿಳಿದುಬಂದಿದೆ. ತಕ್ಷಣವೇ ಪೊಲೀಸರು ಜಿಆರ್ಪಿ, ಜೈಪುರ ಮತ್ತು ರೈಲ್ವೆ ಪೊಲೀಸರಿಗೆ ಈ ಮಾಹಿತಿಯನ್ನು ತಿಳಿಸಿದ್ದು, ಜಿಆರ್ಪಿ ತಂಡ ಆ ವ್ಯಕ್ತಿಯನ್ನು ಗುರುತಿಸಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಬಳಿಕ ದೆಹಲಿ ಪೊಲೀಸ್ ತಂಡ ಆ ವ್ಯಕ್ತಿಯ ಸಹಿತ ಪೋಷಕರೊಂದಿಗೆ ಜೈಪುರ್ಗೆ ತೆರಳಿದ್ದು ನಂತರ ಬುಧ್ ವಿಹಾರ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಬಳಿಕ ಆತನನ್ನು ವಿಚಾರಣೆ ನಡೆಸಿದ್ದ ವೇಳೆ ಆತ, ತಾನು ಐಐಎಂ ಅಹಮದಾಬಾದ್ಗೆ ಸೇರಲು ಎರಡು ಬಾರಿ ಯತ್ನಿಸಿದ್ದೆ ಆದರೆ ಯಶಸ್ವಿಯಾಗಲಿಲ್ಲ. ಈ ಕಾರಣದಿಂದ ನಾನು ಖಿನ್ನತೆಗೆ ಒಳಗಾಗಿದ್ದೆ. ಹಾಗಾಗಿ ನಾನು ರೈಲಿನಿಂದ ಹಾರಿ ಪ್ರಾಣ ಕಳೆದುಕೊಳ್ಳು ತೀರ್ಮಾನಿಸಿದ್ದೆ ಎಂದು ತಿಳಿಸಿದ್ದಾನೆ.