ನವದೆಹಲಿ, ಜು 22 (Daijiworld News/MSP): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಜುಲೈ ತಿಂಗಳ ಅಂತ್ಯದ ವೇಳೆಗೆ ಇಲ್ಲಿನ ಲೋಧಿ ಎಸ್ಟೇಟ್ ನಲ್ಲಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ ಹರಿಯಾಣದ ಗುರುಗ್ರಾಮದ ಸೆಕ್ಟರ್ 42 ರ ಡಿಎಲ್ಎಫ್ ಅರಾಲಿಯಾದಲ್ಲಿರುವ ಮನೆಗೆ ಸ್ಥಳಾಂತರಗೊಳ್ಳಲು ಸಜ್ಜಾಗಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತ ಮೂಲಗಳು , ಕಾಂಗ್ರೆಸ್ ನಾಯಕಿ ಮುಂದಿನ ಕೆಲವು ತಿಂಗಳು ಗುರುಗ್ರಾಮದಲ್ಲಿಯೇ ಕಳೆಯಲಿದ್ದಾರೆ. ಸದ್ಯ ವಸತಿಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಎರಡು ಅಥವಾ ಮೂರು ಸ್ಥಳಗಳನ್ನು ಹುಡುಕುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಅದನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ತಿಳಿಸಿವೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹಂಚಿಕೆ ಮಾಡಿದ್ದ ಅಧಿಕೃತ ಸರ್ಕಾರಿ ಬಂಗಲೆಯನ್ನು ಈ ತಿಂಗಳ ಕೊನೆಯ ಒಳಗಾಗಿ ತೆರವುಗೊಳಿಸುವಂತೆ ಗೃಹ ನಿರ್ಮಾಣ ಸಚಿವಾಲಯ ಸೂಚನೆ ನೀಡಿದ ಹಿನ್ನಲೆಯಲ್ಲಿ ಅವರು ಸರ್ಕಾರಿ ಬಂಗಲೆ ತೆರವುಗೊಳಿಸುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಯವರಿಗೆ ಝೆಡ್ ಪ್ಲಸ್ ಭದ್ರತಾ ಸೌಲಭ್ಯವಿದ್ದು, ಎಸ್ಪಿಜಿ ಭದ್ರತೆಯನ್ನುರದ್ದುಪಡಿಸಿದ ಹಿನ್ನೆಲೆಯಲ್ಲಿ, ಲೋಧಿ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುವ ಅವಕಾಶವಿಲ್ಲ.
ಈಗಾಗಲೇ ಅವರ ಸರ್ಕಾರಿ ಬಂಗಲೆಯಿಂದ ಹೆಚ್ಚಿನ ಗೃಹೋಪಯೋಗಿ ವಸ್ತುಗಳನ್ನು ಗುರುಗ್ರಾಮ್ ಮನೆಗೆ ಸ್ಥಳಾಂತರಿಸಲಾಗಿದೆ ಮತ್ತು ಭದ್ರತಾ ಪರಿಶೀಲನೆ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.