ಲಕ್ನೋ, ಜು. 22 (DaijiworldNews/MB) : ಮುಸ್ಲಿಂ ಧರ್ಮಗುರುಗಳು ಬಕ್ರೀದ್ ದಿನ ಪ್ರಾಣಿಗಳ ವಧೆ ನಿಷೇಧವನ್ನು ತೆಗೆದುಹಾಕಬೇಕೆಂದು ಕೋರಿದ್ದು ಈ ನಡುವೆ ಎಲ್ಲಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿರುವ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ), ಬಕ್ರೀದ್ ಸಂದರ್ಭದಲ್ಲಿ ಅಕ್ರಮ ಪ್ರಾಣಿ ಸಾಗಾಣೆ ಹಾಗೂ ಪ್ರಾಣಿಗಳನ್ನು ಕೊಲ್ಲುವುದನ್ನು ತಡೆಯಲು ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಕೋರಿದೆ.
ಪೆಟಾ ಇಂಡಿಯಾದ ಪ್ರದೀಪ್ ರಂಜನ್ ಡೋಲಿ ಬಾರ್ಮನ್, ಎಲ್ಲಾ ಧರ್ಮಗಳು ಸಹಾನುಭೂತಿಗಾಗಿ ಕರೆ ನೀಡುತ್ತವೆ. ಯಾವ ಧರ್ಮವು ಪ್ರಾಣಿಗಳನ್ನು ತಿನ್ನುವುದು ಅಥವಾ ಕೊಲ್ಲುವ ಅಗತ್ಯವಿಲ್ಲ. ಅವುಗಳನ್ನು ಶಸ್ತ್ರಾಸ್ತ್ರಗಳಿಂದ ಕೊಲ್ಲುವುದು ಕ್ರೂರವಾದದ್ದು ಎಂದು ಹೇಳಿದ್ದಾರೆ.
ಭಾರತದ ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಎತ್ತಿಹಿಡಿಯುವುದು ಮತ್ತು ಜಾರಿಗೊಳಿಸುವುದು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಹೇಳಿದ ಅವರು, ತರಬೇತಿ ಪಡೆಯದ ಜನರು ಪ್ರಾಣಿ ವಧೆ ಮಾಡುವುದನ್ನು ನಿಷೇಧಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಹಾಗೆಯೇ ಪೆಟಾ ಇಂಡಿಯಾ ಈ ಪತ್ರದಲ್ಲಿ ಪ್ರಾಣಿಗಳ ವಧೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಅಧಿಕೃತವಾಗಿ ಪರವಾನಗಿ ಪಡೆದ ಕಸಾಯಿಖಾನೆಗಳಲ್ಲಿ ಮಾತ್ರ ಪ್ರಾಣಿಗಳನ್ನು ಹತ್ಯೆ ಮಾಡಬಹುದು ಎಂದು ತೀರ್ಪು ನೀಡಿದೆ ಹಾಗೂ ಈ ಬಗ್ಗೆ ಪುರಸಭೆಯ ಅಧಿಕಾರಿಗಳು ಗಮನಹರಿಸಬೇಕು ಎಂಬ ಎರಡು ವಿಚಾರಗಳನ್ನು ಉಲ್ಲೇಖಿಸಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕಾನೂನುಗಳು ಮತ್ತು ಆಹಾರ ಸುರಕ್ಷತೆ ಮಾನದಂಡಗಳ ಮಾರ್ಗಸೂಚಿಗಳು ನಿರ್ದಿಷ್ಟ ಉಪಕರಣಗಳನ್ನು ಬಳಸಿ ಪರವಾನಗಿ ಪಡೆದ ಕಸಾಯಿಖಾನೆಗಳಲ್ಲಿ ಆಹಾರಕ್ಕಾಗಿ ಮಾತ್ರ ಪ್ರಾಣಿಗಳನ್ನು ವಧಿಸಲು ಅನುಮತಿಸುತ್ತದೆ. ಹಬ್ಬದ ಸಂದರ್ಭದಲ್ಲಿ ಪ್ರಾಣಿಗಳ ಸಾಗಣೆಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ಆಗಸ್ಟ್ 1 ರಂದು ಆಚರಿಸಲಾಗುವ ಬಕ್ರೀದ್ ಹಬ್ಬದಂತಹ ಸಂದರ್ಭದಲ್ಲಿ ಸಾವಿರಾರು ಆಡುಗಳು, ಎಮ್ಮೆಗಳು, ಒಂಟೆಗಳು ಮತ್ತು ಇತರ ಪ್ರಾಣಿಗಳ ಹತ್ಯೆ ಮಾಡಲಾಗುತ್ತದೆ ಎಂದು ಪೆಟಾ ಇಂಡಿಯಾ ಹೇಳಿದ್ದು ಇತ್ತೀಚೆಗೆ ಕಾನೂನುಬಾಹಿರವಾಗಿ ಪ್ರಾಣಿಗಳನ್ನು ಸಾಗಾಟ ಮಾಡುವುದು, ಟ್ರಕ್ಗಳಲ್ಲಿ ತುಂಬಿಸಿ ಅದಕ್ಕೆ ಹಾನಿ ಉಂಟು ಮಾಡುವುದು, ಪ್ರಾಣಿಗಳಿಗೆ ತಳಿಸುವುದು, ಪರಿಣಿತಿ ಇಲ್ಲದವರು ಪ್ರಾಣಿ ವಧೆ ಮಾಡುವುದು ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.