ನವದೆಹಲಿ, ಜು 22 (Daijiworld News/MSP): ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು" ರಾಮ ರಾಜ್ಯದ ಭರವಸೆ ನೀಡಿ ಗೂಂಡಾ ರಾಜ್ಯವನ್ನು ನೀಡಲಾಗಿದೆ" ಎಂದು ಹರಿಹಾಯ್ದಿದ್ದಾರೆ.
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ ರಾಹುಲ್, " ಪತ್ರಕರ್ತ ವಿಕ್ರಮ್ ಜೋಶಿ ತನ್ನ ಸೋದರನ ಮಗಳ ಮೇಲಿನ ದೌರ್ಜನ್ಯವನ್ನ ವಿರೋಧಿಸಿದಕ್ಕೆ ಹತ್ಯೆಯಾಗಿದ್ದಾರೆ. ವಿಕ್ರಮ್ ಅವರನ್ನ ಕಳೆದುಕೊಂಡು ತಬ್ಬಲಿಯಾಗಿರುವ ಅವರ ಕುಟುಂಬಕ್ಕೆ ನನ್ನ ಸಂತಾಪ. ರಾಮರಾಜ್ಯದ ಭರವಸೆ ಕೊಟ್ಟವರು ಈಗ ಗೂಂಡಾರಾಜ್ಯ ನಡೆಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
" ಪತ್ರಕರ್ತನ ಹತ್ಯೆ ನಿಜಕ್ಕೂ ಆಘಾತಕಾರಿ ಮತ್ತು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಮತ್ತೊಂದು ಉದಾಹರಣೆ" ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಹೇಳಿದ್ದಾರೆ.
"ಇದು ಕಳೆದ ಆರು ವರ್ಷಗಳಿಂದ ಮಾಧ್ಯಮಗಳನ್ನು ಹೇಗೆ ವ್ಯವಸ್ಥಿತವಾಗಿ ಬೆದರಿಸಿದೆ ಎಂಬುದರ ಕಠೋರ ಜ್ಞಾಪನೆಯಾಗಿದೆ. ಶ್ರೀ ಜೋಶಿಯವರ ಕುಟುಂಬಕ್ಕೆ ನಮ್ಮ ಸಂತಾಪ. ನಾವು ನಿರ್ಭೀತ ಪತ್ರಿಕೋದ್ಯಮದ ಹಿಂದೆ ನಿಲ್ಲುತ್ತೇವೆ " ಎಂದು ಅವರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಕಳೆದ ಸೋಮವಾರ ರಾತ್ರಿ ಗಾಜಿಯಾಬಾದ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತ ವಿಕ್ರಮ್ ಜೋಷಿ ಮೇಲೆ ಅವರ ಮಕ್ಕಳ ಮುಂದೆಯೇ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿತ್ತು. ಗಂಭೀರ ಗಾಯಗೊಂಡ ಜೋಶಿಯನ್ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅವರು ಬುಧವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.