ಲಖನೌ, ಜು. 22 (DaijiworldNews/MB) : ಕೊರೊನಾಕ್ಕಿಂತ ಅಪರಾಧದ ವೈರಸ್ ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.
ಗಾಜಿಯಾಬಾದ್ನ ವಿಜಯನಗರದಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಒಳಗಾಗಿದ್ದ ಪತ್ರಕರ್ತ ವಿಕ್ರಮ್ ಜೋಷಿ ಚಿಕಿತ್ಸೆ ಫಲಿಸದೇ ಬುಧವಾರ ಮುಂಜಾನೆ ಸಾವನ್ನಪ್ಪಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮೂಲಕ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು, ''ಸೊಸೆಗೆ ಕಿರುಕುಳ ನೀಡುತ್ತಿದ್ದನ್ನು ವಿರೋಧಿಸಿದ ಪತ್ರಕರ್ತ ಶ್ರೀ ವಿಕ್ರಮ್ ಜೋಶಿ ಅವರು ಯುಪಿಯ ಜಂಗಲ್ರಾಜ್ ನಲ್ಲಿ ಗುಂಡಿಗೆ ಬಲಿಯಾಗಿದ್ದಾರೆ. ಅವರ ದುಃಖಿತ ಕುಟುಂಬಕ್ಕೆ ಸಂತಾಪಗಳು'' ಎಂದು ಹೇಳಿದ್ದಾರೆ.
ಹಾಗೆಯೇ ''ಕೊಲೆ ಮತ್ತು ಸ್ತ್ರೀ ಅಭದ್ರತೆ ಸೇರಿದಂತೆ ಎಲ್ಲಾ ರೀತಿಯ ಗಂಭೀರ ಅಪರಾಧಗಳ ಪ್ರವಾಹ ಯುಪಿಯಲ್ಲಿ ಮುಂದುವರೆದಿದೆ. ಜಂಗಲ್ ರಾಜ್ ಯುಪಿ ಯಲ್ಲಿ ಕಾನೂನುಗಿಂತ ಹೆಚ್ಚಾಗಿ ಅಟ್ಟಹಾಸ ಮೆರೆಯುತ್ತಿದೆ. ಜನರಿಗೆ ಇದರಿಂದ ತೊಂದರೆಯಾಗಿದೆ. ಯುಪಿಯಲ್ಲಿ ಕೊರೊನಾ ವೈರಸ್ಗಿಂತ ಅಪರಾಧ ವೈರಸ್ ಹೆಚ್ಚು ಪ್ರಾಬಲ್ಯ ಹೊಂದಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು'' ಎಂದು ಹೇಳಿದ್ದಾರೆ.