ಬೆಂಗಳೂರು, ಜು 22 (Daijiworld News/MSP): ಕರ್ನಾಟಕದಲ್ಲಿ ಜುಲೈ.23ಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವು ಪತನಗೊಂಡು ಸರಿಯಾಗಿ ಒಂದು ವರ್ಷ ಕಳೆಯುತ್ತದೆ. ಈ ನಡುವೆ ಮೈತ್ರಿ ಸರ್ಕಾರದ ಪತನದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.
ಮೈತ್ರಿ ಸರ್ಕಾರದ ಪತನದ ವಿಚಾರವಾಗಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ " ಕಾಂಗ್ರೆಸ್ ನಾಯಕರು ಈಗ ಮರಣೋತ್ತರ ಪರೀಕ್ಷೆ ಬಗ್ಗೆ ರಾಗ ಎಳೆಯುತ್ತಿದ್ದಾರೆ. ಆದರೆ ವರದಿಯಲ್ಲಿ ಏನಿದೆ ಎಂಬ ಸತ್ಯಾಂಶವನ್ನು ನಾನು ಹೇಳಿದರೆ ಆ ಭಾಷೆ ನನಗೆ ಅರ್ಥವಾಗಲಿಲ್ಲ ಎಂದು ಜಾರಿಕೊಳ್ಳುವುದು ತರವಲ್ಲ" ಎಂದು ಕಾಂಗ್ರೆಸ್ ನ್ನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ಮೈತ್ರಿಯಲ್ಲಿ ರಚಿಸಲ್ಪಟ್ಟ ಸರ್ಕಾರದ ಪತನಕ್ಕೆ ಆಪರೇಷನ್ ಕಮಲದ ಜೊತೆಗೆ ಸಿದ್ಧೌಷಧವೂ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಅವರ "ಸಿದ್ಧೌಷಧ"ಮಾತಿನ ತಾತ್ಪರ್ಯ ನಮಗೆ ಅರ್ಥವಾಗುವುದಿಲ್ಲ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು.
ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ " ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ರಾಜ್ಯದಲ್ಲಿ 8 ಇಲ್ಲವೆ 10 ಸ್ಥಾನ ಗೆಲ್ಲಬಹುದಿತ್ತು ಎಂದು ಸಿದ್ದರಾಮಯ್ಯ ಅವರು ಇತ್ತೀಚಿಗೆ 'ಮೆಲುಕು' ಹಾಕಿದ್ದರಿಂದಲೇ ನಾನು ಸಿದ್ಧೌಷಧದ ಬಗ್ಗೆ ನೆನಪಿಸಿಕೊಳ್ಳಬೇಕಾಯಿತು .ಅವರ ಕನಸು-ಕನವರಿಕೆಗಳನ್ನು ಮೈತ್ರಿ ಸರ್ಕಾರ ಹೋದ ನಂತರವೂ ಜಪಿಸುತ್ತಿರುವುದರಿಂದಲೇ ಹಳೆಯದನ್ನು ನೆನಪಿಸಿಕೊಳ್ಳಬೇಕಾಯಿತು. ನಮ್ಮ ಅವರ ದೋಸ್ತಿ ಕಳಚಿದ ನಂತರ ಈ ಬಗ್ಗೆ ನಾನು ಮಾತನಾಡಿರಲಿಲ್ಲ. ಕಾಂಗ್ರೆಸ್ ನಾಯಕರೇ ಪದೇಪದೇ ಮೈತ್ರಿ ಮುಗಿದ ಅಧ್ಯಾಯ ಎಂದು ಈಗ ತುಟಿ ಬಿಚ್ಚುತ್ತಿರುವುದರಿಂದ ನಾನು ಮೌನ ಮುರಿಯಬೇಕಾಯಿತು. ಕಾಂಗ್ರೆಸ್ ನಾಯಕರು ಈಗ ಮರಣೋತ್ತರ ಪರೀಕ್ಷೆ ಬಗ್ಗೆ ರಾಗ ಎಳೆಯುತ್ತಿದ್ದಾರೆ. ಆದರೆ ವರದಿಯಲ್ಲಿ ಏನಿದೆ ಎಂಬ ಸತ್ಯಾಂಶವನ್ನು ನಾನು ಹೇಳಿದರೆ ಆ ಭಾಷೆ ನನಗೆ ಅರ್ಥವಾಗಲಿಲ್ಲ ಎಂದು ಜಾರಿಕೊಳ್ಳುವುದು ತರವಲ್ಲ" ಎಂದು ವ್ಯಂಗ್ಯವಾಡಿದ್ದಾರೆ.