ಮುಂಬೈ, ಜು. 22 (DaijiworldNews/MB) : ''ನಾನು ಡೊನಾಲ್ಡ್ ಟ್ರಂಪ್ ಅಲ್ಲ. ನನ್ನ ಜನರು ನನ್ನ ಕಣ್ಣ ಮುಂದೆ ನೋವನ್ನು ಅನುಭವಿಸುವುದನ್ನು ನಾನು ನೋಡಲಾರೆ'' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ.
ಶಿವಸೇನೆಯ ಮುಖವಾಣಿ "ಸಾಮ್ನಾ"ದಲ್ಲಿ ಪಕ್ಷದ ವಕ್ತಾರ, ಸಂಸದ ಸಂಜಯ್ ರಾವತ್ ಅವರಿಗೆ ನೀಡಿದ ಸಂದರ್ಶನವೊಂದರ ಟೀಸರ್ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಜನಪ್ರಿಯ ತಿಂಡಿ "ವಡಾ ಪಾವ್" ಮುಂಬೈನ ಬೀದಿಗಳಲ್ಲಿ ಯಾವಾಗ ಲಭ್ಯವಾಗಲಿದೆ, ಜನರು ನಿರ್ಬಂಧದಿಂದ ಬೇಸರಗೊಂಡಿದ್ದಾರೆ ಎಂದು ಸಂಜಯ್ ರಾವತ್ ಕೇಳಿದಾಗ ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ನಾನು ಡೊನಾಲ್ಡ್ ಟ್ರಂಪ್ ಅಲ್ಲ. ನನ್ನ ಜನರು ನನ್ನ ಕಣ್ಣ ಮುಂದೆ ನೋವನ್ನು ಅನುಭವಿಸುವುದನ್ನು ನಾನು ನೋಡಲಾರೆ'' ಎಂದು ಹೇಳಿದ್ದಾರೆ.
ವಿಶ್ವದಲ್ಲೇ ಅಧಿಕ ಕೊರೊನಾ ಪ್ರಕರಣಗಳು ಅಮೆರಿಕಾದಲ್ಲಿ ದಾಖಲಾಗಿದ್ದು ಈ ಕಾರಣದಿಂದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಟೀಕೆ ಎದುರಿಸುತ್ತಿದ್ದಾರೆ.
ಹಾಗೆಯೇ ''ಲಾಕ್ಡೌನ್ ಪೂರ್ತಿಯಾಗಿ ತೆರವು ಮಾಡಲಾಗಿಲ್ಲ. ಈಗಲೂ ಲಾಕ್ಡೌನ್ ಇದೆ. ಒಂದೊಂದೇ ವಲಯಕ್ಕೆ ವಿನಾಯಿತಿ ನೀಡುವ ಮೂಲಕ ಹಂತ ಹಂತವಾಗಿ ಲಾಕ್ಡೌನ್ ತೆರವುಗೊಳಿಸಲಾಗುತ್ತದೆ'' ಎಂದು ಹೇಳಿದ್ದಾರೆ.