ಬೆಂಗಳೂರು, ಜು. 22 (DaijiworldNews/SM): ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾಗಿರುವ ಮಾಜಿ ಶಾಸಕ ಎಚ್. ವಿಶ್ವನಾಥ್ ಹಾಗೂ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರಿಗೆ ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ವಿಧಾಸಭೆಗೆ ಆಯ್ಕೆ ಮಾಡಿಕೊಂಡಿದೆ.
ಎಚ್ ವಿಶ್ವನಾಥ, ಸಿ. ಪಿ ಯೋಗೇಶ್ವರ್, ಭಾರತಿ ಶೆಟ್ಟಿ, ಸಾಯಿಬಣ್ಣ ತಳವಾರ, ಶಾಂತಾರಾಂ ಸಿದ್ದಿ ನೂತನವಾಗಿ ಆಯ್ಕೆಯಾದ ಐವರು ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ನೂತನ ಸದಸ್ಯರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಬುಧವಾರ ಆದೇಶ ಹೊರಡಿಸಿದ್ಧಾರೆ.
ಸಾಹಿತ್ಯ ಕ್ಷೇತ್ರದಿಂದ ಎಚ್. ವಿಶ್ವನಾಥ್, ಸಿನಿಮಾ ಕ್ಷೇತ್ರದಿಂದ ಸಿ.ಪಿ ಯೋಗೇಶ್ವರ್, ಸಮಾಜ ಸೇವೆ ಕ್ಷೇತ್ರದಿಂದ ಭಾರತಿ ಶೆಟ್ಟಿ, ಶಿಕ್ಷಣ ಕ್ಷೇತ್ರದಿಂದ ಸಾಬಣ್ಣ ತಳವಾರ, ಬುಡಕಟ್ಟು ಕ್ಷೇತ್ರದಿಂದ ಶಾಂತಾರಾಂ ಸಿದ್ದಿ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿಕೊಂಡಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೂಚನೆಯಂತೆ ಎಚ್ ವಿಶ್ವನಾಥ್ ಹಾಗೂ ಸಿ.ಪಿ.ಯೋಗೇಶ್ವರ್ ಅವರನ್ನು ಹಾಗೂ ಸಂಘದ ಹಿನ್ನೆಲೆಯ ಮೂವರನ್ನು ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿದೆ.