ನವದೆಹಲಿ, ಜು. 23 (DaijiworldNews/MB) : ''ದೇಶದಲ್ಲಿ ವಿದೇಶಿ ಬಂಡಾಳ ಹೂಡಿಕೆಗೆ ಇದು ಸರಿಯಾದ ಕಾಲ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ-ಅಮೆರಿಕಾ ಉದ್ಯಮಿ ಮಂಡಳಿ ಆಯೋಜಿಸಿರುವ 2 ದಿನಗಳ ಇಂಡಿಯಾಸ್ ಐಡಿಯಾಸ್ ಸಮ್ಮೇಳನದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ''ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಕಾಲವಾಗಿದೆ. ಇಂತಹ ಕಾಲ ಇನ್ನೆಂದು ಕೂಡಾ ಬರಲಾರದು. ನಾವು ಕೊರೊನಾ ವೈರಸ್ನ್ನು ಎದುರಿಸಿ ಜಗತ್ತನ್ನು ಬಲಿಷ್ಟವಾಗಿ ಕಟ್ಟಬೇಕಾಗಿದೆ'' ಎಂದು ಹೇಳಿದ್ದಾರೆ.
''2019-20ರಲ್ಲಿ ಭಾರತದಲ್ಲಿ ಎಫ್ಡಿಐ ಒಳಹರಿವು 74 ಬಿಲಿಯನ್ ಡಾಲರ್ ಆಗಿತ್ತು. ಆದರೆ ಈಗ ಶೇ. 20ರಷ್ಟು ಏರಿಕೆಯಾಗಿದೆ. ಏಪ್ರಿಲ್-ಜುಲೈ ನಡುವಿನಲ್ಲೇ 20 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆಯನ್ನು ಭಾರತ ಆಕರ್ಷಿಸಿದೆ. ದೇಶವು ಆತ್ಮನಿರ್ಭರ್ ಭಾರತದ ಮೂಲಕ ವಿಶ್ವದ ಏಳಿಗೆಗೂ ಕೊಡುಗೆ ನೀಡುತ್ತಿದೆ. ಅಮೆರಿಕಾದ ಸಹಭಾಗಿತ್ವವನ್ನು ಬಯಸಿದ್ದೇವೆ'' ಎಂದು ಹೇಳಿದರು.