ನವದೆಹಲಿ, ಜು 23 (DaijiworldNews/PY): ಮಗಳನ್ನು ಅಪಹರಿಸಲು ಬಂದ ಇಬ್ಬರು ವ್ಯಕ್ತಿಗಳಿಂದ ಹೋರಾಡಿ ತನ್ನ 4 ವರ್ಷದ ಮಗುವನ್ನು ತಾಯಿ ರಕ್ಷಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಈಗ ವೈರಲ್ ಆಗಿದೆ.
ಮಗುವಿನ ಮಾವ ಉಪೇಂದ್ರ ಎಂಬಾತ ಈ ಅಪಹರಣದ ಪ್ರಮುಖ ರುವಾರಿಯಾಗಿದ್ದಾನೆ. ಮಗುವನ್ನು ಅಪಹರಣ ಮಾಡಿದರೆ, ಮಗುವಿನ ಪೋಷಕರಿಂದ ಹಣ ಪಡೆಯಬಹುದು ಎನ್ನುವ ಉಪಾಯದಿಂದ ಉಪೇಂದ್ರ ಈ ಯೋಜನೆ ಹಾಕಿದ್ದು, ಮಗುವನ್ನು ಅಪಹರಣ ಮಾಡಲೆಂದೇ ಇಬ್ಬರು ವ್ಯಕ್ತಿಗಳನ್ನು ನೇಮಿಸಿದ್ದ.
ಅಪಹರಣಕ್ಕಾಗಿ ಉಪೇಂದ್ರ ನೇಮಕ ಮಾಡಿದ್ದ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಬಂದಿದ್ದು, ಹೆಲ್ಮೆಟ್ ಧರಿಸಿದ್ದರು. ಅಪಹರಣಕಾರರು ಮನೆ ಒಳಗಿದ್ದ ಮಗುವನ್ನು ಎಳೆದು ಬೈಕ್ನಲ್ಲಿ ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಇದನ್ನು ನೋಡಿದ ಮಗುವಿನ ತಾಯಿ ಮನೆಯಿಂದ ಓಡಿ ಬಂದು ಬೈಕ್ ಅನ್ನು ತಳ್ಳಿ ಹಾಕಿ ಅಪಹರಣಕಾರರಿಂದ ಮಗುವನ್ನು ಎಳೆದು ರಕ್ಷಿಸಿದ್ದಾರೆ.
ಈ ಸಂದರ್ಭ ಓರ್ವ ಅಪಹರಣಕಾರ ಓಡಿ ಹೋಗಿದ್ದು, ಇನ್ನೋರ್ವ ಬೈಕ್ ಎತ್ತಿಕೊಂಡು ಕಾಲ್ಕಿತ್ತಿದ್ದ. ಈ ವೇಳೆ ಅಪಹರಣಕಾರರನ್ನು ಓರ್ವ ವ್ಯಕ್ತಿ ಬೈಕ್ ಅಡ್ಡ ಹಾಕಿ ಅವರನ್ನು ಹಿಡಿಯಲು ಪ್ರಯತ್ನಪಟ್ಟರು ಕೂಡಾ ಅದು ಸಫಲವಾಗಲಿಲ್ಲ.
ಪೊಲೀಸರು ಬೈಕ್ ನಂಬರ್ ಹಾಗೂ ಅವರ ಬ್ಯಾಗ್ನಲ್ಲಿ ದೊರೆತಿದ್ದ ವಸ್ತುಗಳ ಆಧಾರದ ಮೇಲೆ ಅಪಹರಣಕಾರರನ್ನು ಹಿಡಿದಿದ್ದಾರೆ. ವಿಚಾರಣೆಯ ಸಂದರ್ಭ ಇಬ್ಬರು ವ್ಯಕ್ತಿಗಳು ಉಪೇಂದ್ರನ ಹೆಸರನ್ನು ಹೇಳಿದ್ದಾರೆ. ಬಳಿಕ ಉಪೇಂದ್ರನನ್ನು ಕೂಡಾ ಬಂಧಿಸಿ ವಿಚಾರಣೆ ನಡೆಸಿದ್ದು, ಅಪಹರಣ ಮಾಡಿದವರಿಗೆ ಒಂದು ಲಕ್ಷ ಹಣ ನೀಡುವುದಾಗಿ ಹೇಳಿದ್ದೆ ಎಂದಿದ್ದಾನೆ.
ಉಪೇಂದ್ರ ಎಂಬಾತ ಮಗುವಿನ ತಾಯಿಯ ತಮ್ಮನಾಗಿದ್ದು, ಆಕೆಗೆ ಮೊದಲಿನಿಂದಲೂ ಆತನನ್ನು ಕಂಡರೆ ಆಗುತ್ತಿರಲಿಲ್ಲ. ಉಪೇಂದ್ರನಿಗೆ ಹಣದ ಅವಶ್ಯಕತೆ ಇದ್ದ ಕಾರಣ ಆತ ಮಗುವಿನ ಅಪಹರಣ ಮಾಡಲು ಯತ್ನಿಸಿದ್ದಾನೆ.
ತನ್ನ ಮಗುವನ್ನು ರಕ್ಷಣೆ ಮಾಡಿದ ತಾಯಿಯ ಧೈರ್ಯಕ್ಕೆಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.