ಬೆಂಗಳೂರು, ಜು. 23 (DaijiworldNews/MB) : ''ಪ್ರಸ್ತುತ ಕೊರೊನಾ ಸೋಂಕು ಇರುವ ಈ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿರುತ್ತಿದ್ರೆ ರಾಜ್ಯವನ್ನು ಉಳಿಸಲು ದೇವರಿಗೂ ಅಸಾಧ್ಯ'' ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿದ್ಧರಾಮಯ್ಯ ಅವರನ್ನು ಟೀಕೆ ಮಾಡಿದ್ದಾರೆ.
ಕೋಲಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡಲು ಬಿಜೆಪಿ ರಾಜ್ಯ ಸರ್ಕಾರ ಯಶಸ್ವಿಯಾಗಿದ್ದು ಮುಖ್ಯಮಂತ್ರಿ ಬಿಎಸ್ವೈ ಅವರ ಮೇಲೆ ದೇವರ ಕೃಪೆ ಇರುವ ಕಾರಣ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಒಂದು ವೇಳೆ ಈಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆಗಿರುತ್ತಿದ್ದರೆ ದೇವರಿಗೂ ರಾಜ್ಯವನ್ನು ಉಳಿಸಲು ಅಸಾಧ್ಯವಾಗುತ್ತಿತ್ತು'' ಎಂದು ವ್ಯಂಗ್ಯ ಮಾಡಿದ್ದಾರೆ.
''ಸುಮ್ಮಸುಮ್ಮನೇ ಸರ್ಕಾರದ ವಿರುದ್ಧ ಮೆಡಿಕಲ್ ಕಿಟ್ ಹಗರಣದ ಆರೋಪ ಮಾಡುತ್ತಿದೆ. ಈ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದ ಜೊತೆ ನಿಲ್ಲಬೇಕಾದ ವಿರೋಧ ಪಕ್ಷ ಈಗ ರಾಜಕೀಯ ಮಾಡುತ್ತಿದೆ. ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗ ತುರ್ತು ಸಂದರ್ಭದಲ್ಲಿ ಸರ್ಕಾರದ ಜೊತೆ ನಿಂತಿದೆ. ಆದರೆ ಈಗ ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸುತ್ತಿದೆ'' ಎಂದು ಕಿಡಿಕಾರಿದರು
''ಬೇರೆ ಬೇರೆ ಕಡೆಯಲ್ಲಿ ಇತಿಹಾಸ ಸೃಷ್ಟಿ ಮಾಡಿರುವವರು ಈಗ ಭ್ರಷ್ಟಾಚಾರದ ಬಗ್ಗೆ ಮಾತಾನಾಡುತ್ತಾರೆ. ಈ ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ತಿಹಾರ್ ಜೈಲಿನಲ್ಲಿ ಯಾಕಾಗಿ ಕುಳಿತಿದ್ದರು'' ಎಂದು ಲೇವಡಿ ಮಾಡಿದರು.