ಹರಿಯಾಣ, ಜು 23 (Daijiworld News/MSP): ಲಾಕ್ ಡೌನ್ ಹಾಗೂ ಕೊರೊನಾ ಸಾಂಕ್ರಮಿಕ ರೋಗದ ಹಿನ್ನಲೆಯಲ್ಲಿ ಅರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಹರಿಯಾಣ ಟೀ ಅಂಗಡಿಯಾತ ಸಾಲ ಪಡೆಯಲೆಂದು ಬ್ಯಾಂಕ್ ಗೆ ಹೋಗಿದ್ದಾಗ ಬ್ಯಾಂಕ್ ಅಧಿಕಾರಿಗಳ ಮಾತು ಕೇಳಿ ಬೆಚ್ಚಿಬಿದ್ದಿದ್ದಾನೆ.
ಹರಿಯಾಣ ಕುರುಕ್ಷೇತ್ರದ ರಸ್ತೆ ಬದಿಯ ಚಹಾ ಮಾರಾಟಗಾರ ರಾಜ್ ಕುಮಾರ್ ಎಂದಿಗೂ ಬ್ಯಾಂಕ್ ನಲ್ಲಿ ಸಾಲ ಮಾಡಿದವನಲ್ಲ. ಕೊರೊನಾದಿಂದಾಗಿ ಚಹಾ ಮಾರಾಟವಾಗದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬೇರೆ ದಾರಿ ತೋರದೆ ಬ್ಯಾಂಕ್ ಸಾಲ ಪಡೆಯಲು ಯೋಚಿಸಿದ್ದಾನೆ.
ಆದರೆ ಸಾಲಕ್ಕಾಗಿ ಬ್ಯಾಂಕ್ ಬಾಗಿಲು ಬಡಿದರೆ " ಸಾಲ ಕೊಡಲಾಗುವುದಿಲ್ಲ, ನೀನು ಮಾಡಿದ 50 ಕೋಟಿ ಸಾಲ ಈಗಾಗಲೇ ಬಾಕಿ ಇದೆ ಎಂದು ಸಾಲದ ಅರ್ಜಿ ತಿರಸ್ಕರಿಸಿದ್ದಾರೆ. ರಾಜ್ ಕುಮಾರ್ ಗೆ ಬ್ಯಾಂಕ್ ಅಧಿಕಾರಗಳ ಈ ಮಾತು ಕೇಳಿ ಬೆಚ್ಚಿಬಿದ್ದಿದ್ದಾನೆ. "ನಾನು ಇಲ್ಲಿವರೆಗೆ ಯಾವುದೇ ಬ್ಯಾಂಕ್ ನಿಂದ ಯಾವ ಸಾಲವನ್ನು ಪಡೆದುಕೊಂಡವನಲ್ಲ. ಆದರೆ, ಬ್ಯಾಂಕ್ ಅಧಿಕಾರಿಗಳ ಪ್ರಕಾರ, ದಾಖಲೆಗಳ ಪ್ರಕಾರ 50 ಕೋಟಿ ಸಾಲವನ್ನು ನಾನು ಈಗಾಗಲೇ ಪಡೆದುಕೊಂಡಿದ್ದೇನಂತೆ . ಇದು ಹೇಗೆ ಎಂದು ಅರ್ಥವೇ ಆಗುತ್ತಿಲ್ಲ" ಎಂದು ರಾಜ್ ಕುಮಾರ್ ಹೇಳಿದ್ದಾರೆ.
ರಾಜ್ಕುಮಾರ್ ಮೂರು ಲಕ್ಷ ರೂಪಾಯಿ ಆಟೋಲೋನ್, 3 ಲಕ್ಷ ರೂಪಾಯಿಯ ವಾಣಿಜ್ಯ ವಾಹನ ಲೋನ್, ದ್ವಿಚಕ್ರ ವಾಹಕ್ಕಾಗಿ ಲೋನ್, ಕನ್ಸ್ಯೂಮರ್ ಲೋನ್ ಸೇರಿ ಒಟ್ಟು 16 ಕಾರಣಗಳಿಗೆ ಹಲವು ಬಾರಿ ಲೋನ್ ಪಡೆದುಕೊಂಡಿದ್ದಾರೆ ಎಂದು ಬ್ಯಾಂಕ್ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ತನಗೆ ಸಾಲ ನೀಡದಿದ್ದರೂ ಪರವಾಗಿಲ್ಲ , ಆದ್ರೆ 50 ಕೋಟಿ ಸಾಲ ಬಾಕಿ ಇದೆ ಅಂದರೆ ಏನರ್ಥ ಎಂದು ಟೀ ಅಂಗಡಿಗೆ ಬರುವ ಗ್ರಾಹಕರಲ್ಲಿ ಕಾಗದ ಪತ್ರಗಳನ್ನು ತೋರಿಸಿ, ಬ್ಯಾಂಕ್ ಸಾಲ ಮರುಪಾವತಿ ಮಾಡುವಂತೆ ನೊಟೀಸ್ ಕೊಟ್ಟರೆ ಮುಂದೇನು? ಎಂದು ಗೋಳು ತೋಡಿಕೊಳ್ಳುತ್ತಿದ್ದಾನೆ.