ನವೆದೆಹಲಿ, ಜು. 23 (DaijiworldNews/MB) : ಮಣಿಪುರದಲ್ಲಿ ನೀರು ಸರಬರಾಜು ಯೋಜನೆಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಶಿಲಾನ್ಯಾಸ ಮಾಡಿದ ಪ್ರಧಾನಿ ಮೋದಿಯವರು, ಇದು ಮಣಿಪುರದ ಮಹಿಳೆಯರಿಗೆ "ರಕ್ಷಾ ಬಂಧನದ ಉಡುಗೊರೆ" ಎಂದು ಹೇಳಿದ್ದಾರೆ.
ಈ ಯೋಜನೆಯು ಇಂಫಾಲ್ ಹಾಗೂ ಮಣಿಪುರದ 1,700 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಮೂಲಕ ಜೀವಸೆಲೆಯಾಗಲಿದೆ. ಇದರಿಂದ ರಾಜ್ಯದ ಒಂದು ಲಕ್ಷ ಕುಟುಂಬದ ಮಹಿಳೆಯರಿಗೆ ಸಹಾಯವಾಗುತ್ತದೆ. ಹಾಗೆಯೇ ಸಾವಿರಾರು ಜನರಿಗೆ ಉದ್ಯೋಗ ಒದಗಿಸುತ್ತದೆ ಎಂದು ಹೇಳಿದರು.
ಈ ಯೋಜನೆಯನ್ನು ಸ್ಥಳೀಯ ಪಂಚಾಯಿತಿಗಳು ಮತ್ತು ಇಲ್ಲಿ ವಾಸಿಸುವ ಜನರ ಸಹಾಯದಿಂದ ವಿನ್ಯಾಸಗೊಳಿಸಲಾಗಿದೆ. "ವಿಕೇಂದ್ರೀಕರಣದ ಉತ್ತಮ ಉದಾಹರಣೆ" ಇದಾಗಿದೆ ಎಂದರು.
ಕೊರೊನಾ ಕಾರಣದಿಂದ ದೇಶ ಸಂಪೂರ್ಣವಾಗಿ ಸ್ತಬ್ಧವಾಗಿಲ್ಲ. ಈ ಸಂದರ್ಭದಲ್ಲೂ ಇಲ್ಲಿ ಪೈಪ್ಲೈನ್ ಹಾಕುವಂತಹ ಕಾರ್ಯಗಳು ಮುಂದುವರೆದಿದೆ ಎಂದು ತಿಳಿಸಿದರು.
2024 ರ ವೇಳೆಗೆ ಗ್ರಾಮೀಣ ಭಾರತದ ಪ್ರತಿ ಮನೆಗಳಿಗೆ ಹರ್ ಘರ್ ಜಲ ಗುರಿಯೊಂದಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರವು ಜಲ ಜೀವನ್ ಮಿಷನ್ ಆರಂಭಿಸಿದೆ. ಗ್ರೇಟರ್ ಇಂಫಾಲ್ ಯೋಜನಾ ಪ್ರದೇಶದ 16 ಜಿಲ್ಲೆಗಳಲ್ಲಿ 25 ಪಟ್ಟಣಗಳು ಮತ್ತು 1,731 ಗ್ರಾಮೀಣ ವಸಾಹತುಗಳಲ್ಲಿ 2,80,756 ಮನೆಗಳನ್ನು ಒಳಗೊಂಡಂತೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.